
ಮಂಗಳೂರು: ಸಾಮಾಜಿಕ ಕಾರ್ಯಕರ್ತನೋರ್ವ ಪೊಲೀಸರ ವಿರುದ್ಧ ಸುಳ್ಳು ಆರೋಪ ಹೊರಿಸಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರದಿಯಾಗಿದೆ.
ಪೊಲೀಸ್ ವಾಹನಕ್ಕೆ ವಿಮೆ ಇಲ್ಲ ಎಂದು ಆರೋಪಿಸಿದ್ದ ಸಾಮಾಜಿಕ ಕಾರ್ಯಕರ್ತನ ವಾಹನಕ್ಕೆ ಎಮಿಷನ್ ಪ್ರಮಾಣಪತ್ರ ಇಲ್ಲದೇ ಇರುವುದನ್ನು ಗಮನಿಸಿದ ಪೊಲೀಸರು ಆತನಿಗೆ 500 ರೂಪಾಯಿ ದಂಡ ವಿಧಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತನೋರ್ವ ಪೊಲೀಸರ ನಿರ್ದಿಷ್ಟ ವಾಹನ KA-19-G-1023 ಕ್ಕೆ ವಿಮೆ ಇಲ್ಲ, ವಿಮೆ ಮಾಡಿಸದ ವಾಹನಗಳನ್ನು ಪೊಲೀಸ್ ಇಲಾಖೆ ಬಳಕೆ ಮಾಡುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.
ವಾಸ್ತವಾಂಶಗಳನ್ನು ಸ್ಪಷ್ಟಪಡಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಪೊಲೀಸ್ ಇಲಾಖೆಯ ಎಲ್ಲಾ ವಾಹನಗಳು ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಿಂದ (ಕೆಜಿಐಡಿ) ಕಡ್ಡಾಯವಾಗಿ ವಿಮೆ ಮಾಡಲ್ಪಟ್ಟಿದೆ ಮತ್ತು ಈ ವಿಮೆಯನ್ನು ಕಾಲಕಾಲಕ್ಕೆ ನವೀಕರಿಸಲಾಗುತ್ತದೆ, ವಿಮೆ ನವೀಕರಣ ಮಾಡದ ವಾಹನಗಳನ್ನು ಬಳಕೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ತೋರಿಸಿರುವಂತೆ ವಿಭಾಗೀಯ ಹೆದ್ದಾರಿ ಗಸ್ತು ವಾಹನ ನೋಂದಣಿ ಸಂಖ್ಯೆ KA-19-G-1023 ದಿನಾಂಕ 13-10-2025 ರವರೆಗೆ ವಿಮಾ ಅವಧಿಯನ್ನು ಹೊಂದಿದೆ ಮತ್ತು ವಾಹನ ಮಾಲಿನ್ಯ ತಪಾಸಣೆ ಅವಧಿಯು 08-01-2025 ರವರೆಗೆ ಮಾನ್ಯವಾಗಿರುತ್ತದೆ.
ವ್ಯತಿರಿಕ್ತವಾಗಿ, 'ಸಾಮಾಜಿಕ ಮಾಧ್ಯಮ ಕಾರ್ಯಕರ್ತ' ಮಾಲೀಕತ್ವದ ದ್ವಿಚಕ್ರ ವಾಹನದ ಎಮಿಷನ್ ಪ್ರಮಾಣಪತ್ರವನ್ನು ನೋಡಲು ಪೊಲೀಸರು ಕೇಳಿದಾಗ, ಅವರು ಅದನ್ನು ನೀಡಲು ಸಾಧ್ಯವಾಗಲಿಲ್ಲ. ನಂತರ ಪೊಲೀಸರು ಈ ಲೋಪಕ್ಕಾಗಿ 500 ರೂಪಾಯಿ ದಂಡವನ್ನು ವಿಧಿಸಿದರು.
Advertisement