
ಬೆಂಗಳೂರು: ರಾಜ್ಯದಲ್ಲಿ ಪೂರ್ವ ಮುಂಗಾರಿನ ಅಬ್ಬರ ಜೋರಾಗಿದೆ. ಕಳೆದೊಂದು ವಾರದಿಂದ ರಾಜ್ಯದ ಬಹುತೇಕ ಕಡೆ ವರುಣಾಬ್ಬರ ಜೋರಾಗಿದ್ದು, ಈ ನಡುವೆ ಮುಂದಿನ ನಾಲ್ಕೈದು ದಿನ ಮಳೆ ಅಬ್ಬರಿಸೋ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಮನೆಯಿಂದ ಹೊರಹೋಗುವ ಮುನ್ನ ಅಗತ್ಯವಾಗಿ ರೈನ್ ಕೋಟ್ ಮತ್ತು ಕೊಡೆ ತೆಗೆದುಕೊಳ್ಳುವುದನ್ನು ಮರೆಯಬೇಡಿ.
ಬೆಂಗಳೂರು ಸುತ್ತಮುತ್ತ ಮೇ 24ರ ವರೆಗೆ ಮುಂದಿನ ಐದು ದಿನಗಳ ಕಾಲ ಬಿರುಗಾಳಿ, ಗುಡುಗು ಸಹಿತ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಾರಾಂತ್ಯದಲ್ಲಿ ತಂಪಾದ ಆರ್ದ್ರ ವಾತಾವರಣವಿದ್ದು, ಶನಿವಾರ ಕೆಲವೆಡೆ ತುಂತುರು ಮಳೆಯಾಗಿದ್ದು, ಭಾನುವಾರವೂ ಸಾಧಾರಣ ಮಳೆಯಾಗಿದೆ. ಹೀಗಾಗಿ ಅನೇಕ ಬೆಂಗಳೂರಿಗರು ತಮ್ಮ ವೀಕೆಂಡ್ ಪ್ಲಾನ್ ರದ್ದುಗೊಳಿಸಿ ಮನೆಯಲ್ಲೇ ಉಳಿದರು, ಕೆಲವರು ನಗರದ ಹವಾಮಾನವನ್ನು ಆನಂದಿಸಲು ಮಳೆಯನ್ನು ಧೈರ್ಯದಿಂದ ಎದುರಿಸಿದರು. ಬೆಂಗಳೂರು ನಗರದಲ್ಲಿ 17.8 ಮಿ.ಮೀ ಮಳೆ ದಾಖಲಾಗಿದ್ದರೆ, ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಭಾನುವಾರ ರಾತ್ರಿ 8.30ರವರೆಗೆ 37.6 ಮಿ.ಮೀ ಮಳೆ ದಾಖಲಾಗಿದೆ. ನಗರದಾದ್ಯಂತ ಸುಮಾರು 15 ಮರಗಳು ನೆಲಕ್ಕುರುಳಿದ್ದು, 50 ಮರದ ಕೊಂಬೆಗಳು ಬಿದ್ದಿವೆ. ಇಂದಿರಾನಗರ, ಎಂಎಸ್ ಪಾಳ್ಯ ಮತ್ತು ಯಲಹಂಕದ ನಿವಾಸಿಗಳು ಮರ ಬಿದ್ದ ಘಟನೆಗಳನ್ನು ವರದಿ ಮಾಡಿದ್ದಾರೆ. ಕನಿಷ್ಠ 13 ಮರಗಳು ಮತ್ತು 32 ಕೊಂಬೆಗಳನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದ್ದಾರೆ.
ಹೆಬ್ಬಾಳ ಮೇಲ್ಸೇತುವೆ, ಹೆಣ್ಣೂರು-ಬಾಗಲೂರು ಮೇಲ್ಸೇತುವೆ, ನಗರದ ಇತರ ಪ್ರಮುಖ ರಸ್ತೆಗಳು ಭಾನುವಾರ ಜಲಾವೃತಗೊಂಡವು. ರಾಮಮೂರ್ತಿನಗರ, ಕೆಆರ್ ಪುರಂ, ಸಂಜಯನಗರ, ಹೆಬ್ಬಾಳ, ಯಲಹಂಕ, ವಸಂತನಗರ, ಮೈಸೂರು ರಸ್ತೆ ಮತ್ತಿತರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.
ಗಾಳಿ ಆಂಜನೇಯ ದೇವಸ್ಥಾನ, ನಾಯಂಡಹಳ್ಳಿ, ಸಿಲ್ಕ್ ಬೋರ್ಡ್, ಎಚ್‌ಎಸ್‌ಆರ್ ಲೇಔಟ್‌ನಂತಹ ಪ್ರವಾಹದಿಂದ ಸಾಮಾನ್ಯವಾಗಿ ಹಾನಿಗೊಳಗಾಗುವ ಪ್ರದೇಶಗಳಲ್ಲಿ ಬಿಬಿಎಂಪಿ ಉನ್ನತಾಧಿಕಾರಿಗಳು ಪರಿಶೀಲಿಸಿದರು. ಮಳೆನೀರು ಯಾವುದೇ ಅಡಚಣೆಯಿಲ್ಲದೆ ಹರಿಯುವಂತೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಬಿಬಿಎಂಪಿ ಕಂಟ್ರೋಲ್ ರೂಂನಲ್ಲಿ ದಾಖಲಾಗಿರುವ ಎಲ್ಲಾ ದೂರುಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕರ್ನಾಟಕ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯ ಎಚ್ಚರಿಕೆಯನ್ನು ಇಲಾಖೆ ಹೊರಡಿಸಿದ್ದು, ಉತ್ತರ ಕನ್ನಡ, ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ ಮತ್ತು ದಾವಣಗೆರೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಭಾಗಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳಭಾಗದ ತಮಿಳುನಾಡು ಮತ್ತು ನೆರೆಹೊರೆಯಲ್ಲಿ ಚಂಡಮಾರುತದ ಪರಿಚಲನೆಯು ತುಂತುರು ಮಳೆಗೆ ಕಾರಣವಾಗಿದೆ, ಮುಂದಿನ 48 ಗಂಟೆಗಳ ಕಾಲ ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ಗುಡುಗು ಸಹಿತ ಮಳೆಯಾಗಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29° ಸೆಲ್ಸಿಯಸ್ ಮತ್ತು 22° ಸೆಲ್ಸಿಯಸ್ ಆಗಿದೆ.
Advertisement