
ಬೆಂಗಳೂರು: ರಾಜ್ಯಾದ್ಯಂತ 69ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಗಡಿ ನಾಡು ಬೆಳಗಾವಿಯಲ್ಲಿ ಮಧ್ಯರಾತ್ರಿಯೇ ರಾಜ್ಯೋತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ.
ಚೆನ್ನಮ್ಮ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಕ- ಯುವತಿಯರ ಜಮಾಯಿಸಿ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ವೈಭವದ ರಾಜ್ಯೋತ್ಸವವನ್ನು ಆಚರಿಸಿದರು. ಈ ವೇಳೆ ಕೆಂಪು-ಹಳದಿ ಬಣ್ಣದ ಬಲೂನ್‌ಗಳ ಗುಚ್ಚವನ್ನು ಆಕಾಶಕ್ಕೆ ತೇಲಿ ಬಿಟ್ಟರು.
ಇದೇ ವೇಳೆ ಕರ್ನಾಟಕ ರತ್ನ ದಿ. ಡಾ.ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರ ಹಿಡಿದು ಬಂದಿದ್ದ ಅವರ ಅಭಿಮಾನಿಗಳು ವಿಶೇಷ ಗೌರವ ಸಲ್ಲಿಸಿದರು. ಅಪ್ಪು ಅಗಲಿ ಮೂರು ವರ್ಷವಾದರೂ ನೀವು ಎಂದೆಂದೂ ಅಜರಾಮರಾ ಎಂಬ ಸಂದೇಶ ಸಾರಿದ್ದು ಎಲ್ಲರ ಗಮನ ಸೆಳೆಯಿತು.
ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ಐತಿಹಾಸಿ ಕಟ್ಟಡಗಳಿಗೆ ಕೆಂಪು ಹಳದಿ ದೀಪಲಂಕಾರ ಮಾಡಲಾಗಿದ್ದು, ವಿಧಾನಸೌಧ ಕಟ್ಟಡ ಕೆಂಪು ಹಾಗೂ ಹಳದಿ ಬಣ್ಣದ ವಿದ್ಯುತ್ ದೀಪಾಲಂಕಾರದಲ್ಲಿ ಕಂಗೊಳಿಸುತ್ತಿದೆ. ಕಟ್ಟಡದ ಸುತ್ತಲೂ ಕನ್ನಡದ ಬಾವುಟಗಳು ರಾರಾಜಿಸುತ್ತಿದೆ. ವಿಧಾನಸೌಧ ಅಷ್ಟೇ ಅಲ್ಲ, ಬಿಬಿಎಂಪಿ ಕಚೇರಿ ರೂಡ ಕೆಂಪು ಹಾಗೂ ಹಳದಿ ಬಣ್ಣ ಬೆಳಕಿನಲ್ಲಿ ಜಗಮಗಿಸುತ್ತಿದೆ.
ರಾಜ್ಯದ ಜನತೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶುಭಾಶಯ
ಈ ನಡುವೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಜ್ಯದ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ನವೆಂಬರ್ 1 ರಂದು ಕರ್ನಾಟಕ ಏಕೀಕರಣವನ್ನು ಆಚರಿಸುತ್ತಿರುವ ನಾವು ನಮ್ಮ ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸೋಣ. ಇಂದು ನಾವು ಕರ್ನಾಟಕದ ಏಕತೆ ಮತ್ತು ಏಳಿಗೆಗಾಗಿ ತಮ್ಮನ್ನು ಅರ್ಪಿಸಿಕೊಂಡ ದಾರ್ಶನಿಕರನ್ನು ಸ್ಮರಿಸೋಣ. ಏಕತೆ, ಸಹೋದರತ್ವ ಮತ್ತು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವ ಮೂಲಕ ಅವರ ಪರಂಪರೆಯನ್ನು ಗೌರವಿಸೋಣ ಹಾಗೂ ರಾಜ್ಯದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೂಡ ರಾಜ್ಯದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ನಾಡಭಾಷೆ ಕನ್ನಡ ಆಡು ಭಾಷೆ, ಅನ್ನದ ಭಾಷೆಯಾಗಲಿ. ನಿತ್ಯ ಬದುಕಿನಲ್ಲಿ ಹೆಚ್ಚೆಚ್ಚು ಕನ್ನಡ ಭಾಷೆಯನ್ನು ಬಳಸೋಣ, ಆ ಮೂಲಕ ಕನ್ನಡವನ್ನು ಬೆಳೆಸೋಣ. "ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ" ಎಂದು ಹೇಳಿದ್ದಾರೆ.
Advertisement