ಬೆಂಗಳೂರು: ಈ ಬಾರಿ ಎರಡು ದಿನಗಳಿಂದ ದೀಪಾವಳಿಯನ್ನು ಸಡಗರ- ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಬೆಂಗಳೂರು ನಗರದಲ್ಲಿ ಸುಮಾರು 40 ಜನರು ಪಟಾಕಿ ಸಿಡಿತದಿಂದ ಗಾಯಗೊಂಡಿದ್ದಾರೆ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನದವರೆಗೂ ಮಿಂಟೋ ಆಸ್ಪತ್ರೆಯಲ್ಲಿ ಆರು ಕಣ್ಣು ಗಾಯದ ಪ್ರಕರಣಗಳು ವರದಿಯಾಗಿವೆ. ಅವರಲ್ಲಿ ಐವರು ಮಕ್ಕಳಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಾಲ್ಕು ಸುಟ್ಟ ಗಾಯದ ಪ್ರಕರಣಗಳು ವರದಿಯಾಗಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ನಗರದ ನಾರಾಯಣ ನೇತ್ರಾಲಯ ಆಸ್ಪತ್ರೆಯಲ್ಲಿ ಪಟಾಕಿ ಸಿಡಿತದಿಂದ ಕಣ್ಣು ಗಾಯದ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಅಕ್ಟೋಬರ್ 31 ರಿಂದ ನವೆಂಬರ್ 1 ರವರೆಗೆ ಕಣ್ಣು ಸಂಬಂಧಿತ ಗಾಯಗಳಿಂದಾಗಿ ಒಟ್ಟು 15 ಪ್ರಕರಣಗಳು ವರದಿಯಾಗಿವೆ.
ಕಾರ್ನಿಯಲ್ ಸವೆತದಂತಹ ಸಣ್ಣ ಗಾಯದಿಂದ ಹಿಡಿದು ಹೈಫೀಮಾ ಮತ್ತು ಎಪಿತೀಲಿಯಲ್ ದೋಷ ವಿರುವ ತೀವ್ರ ತರವಾದ ಗಾಯದ ಪ್ರಕರಣಗಳು ದಾಖಲಾಗಿವೆ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ರೋಹಿತ್ ಶೆಟ್ಟಿ ಹೇಳಿದರು.
ಇನ್ನೂ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಗುರುವಾರ ಎರಡು ತೀವ್ರತರವಾದ ಪ್ರಕರಣ, ಇಂದು 12 ಪ್ರಕರಣಗಳು ವರದಿಯಾಗಿವೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶೇಖರ್ ಕಣ್ಣಿನ ಆಸ್ಪತ್ರೆಯಲ್ಲಿ ಅಕ್ಟೋಬರ್ 31 ರಿಂದ ನವೆಂಬರ್ 1 ರ ಸಂಜೆ 5 ರವರೆಗೆ ನಾಲ್ಕು ಕಣ್ಣಿನ ಗಾಯಗಳ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 13 ವರ್ಷದ ಬಾಲಕನೊಬ್ಬನ ಕಾರ್ನಿಯಲ್ ಗಾಯ ಹಾಗೂ ಏಳು ವರ್ಷದ ಬಾಲಕನೊಬ್ಬ ಗಾಯಗೊಂಡಿರುವುದು ಸೇರಿದೆ.
ಈ ಮಧ್ಯೆ ದೀಪಾವಳಿ ಸಂದರ್ಭದಲ್ಲಿ ಅಕ್ಟೋಬರ್ 31 ರಿಂದ ನವೆಂಬರ್ 1 ರವರೆಗೆ ನಗರದಲ್ಲಿ ಪಟಾಕಿ ನಿಯಂತ್ರಣ ಉಲ್ಲಂಘನೆಯ 56 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. ಸುಪ್ರಿಂ ಕೋರ್ಟ್ ನಿರ್ದೇಶನದ ಪ್ರಕಾರ ದೀಪಾವಳಿ ಸಂದರ್ಭದಲ್ಲಿ ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದೆ.
Advertisement