ಬೆಂಗಳೂರು: ಉತ್ತರ ಭಾರತದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಗಾಳಿಪಟಕ್ಕೆ ಬಳಸುವ 'ಮಾಂಜಾದಾರ'ದ ಕುರಿತು ಕರ್ನಾಟಕ ಸರ್ಕಾರ ಸೋಮವಾರ ಮಹತ್ವದ ನಿರ್ಣಯ ಕೈಗೊಂಡಿದೆ.
ಹೌದು.. ಪ್ರಾಣಿಪ್ರಿಯರ ಸಲಹೆಗಳನ್ನು ಸ್ವೀಕರಿಸಿ, ಮಾನವರು, ಪಕ್ಷಿಗಳು ಮತ್ತು ಪರಿಸರಕ್ಕೆ ಹಾನಿಯನ್ನು ತಡೆಯಲು ಗಾಳಿಪಟ ಹಾರಿಸಲು ಬಳಸುವ ಲೋಹ ಅಥವಾ ಗಾಜಿನ ಲೇಪಿತ ದಾರ ಅಥವಾ ಮಾಂಜಾದಾರ ಬಳಸುವುದನ್ನು ಕರ್ನಾಟಕ ಸರ್ಕಾರ ನಿಷೇಧಿಸಿದೆ ಎಂದು ಸೋಮವಾರ ಪ್ರಕಟಣೆ ತಿಳಿಸಿದೆ.
ಪರಿಸರ (ಸಂರಕ್ಷಣೆ) ಕಾಯಿದೆ (ಇಪಿಎ), 1986 ರ ಸೆಕ್ಷನ್ 5 ರ ಅಡಿಯಲ್ಲಿ ಸರ್ಕಾರವು ತನ್ನ ಅಧಿಸೂಚನೆಗೆ ತಿದ್ದುಪಡಿಯನ್ನು ತಂದು ಆದೇಶ ಹೊರಡಿಸಿದ್ದು, ಈಗ "ಯಾವುದೇ ಚೂಪಾದ, ಲೋಹೀಯ ಅಥವಾ ಗಾಜಿನ ಪುಡಿ, ಅಂಟುಗಳು ಅಥವಾ ಇತರ ಯಾವುದೇ ವಸ್ತುಗಳು ಅಂದರೆ ದಾರವನ್ನು ಬಲಪಡಿಸುವ ಸಾಮಗ್ರಿ ಲೇಪಿತ ಮಾಂಜಾದಾರವನ್ನು ನಿಷೇಧಿಸಲಾಗಿದೆ.
ಗಾಜಿನಪುಡಿ ಅಥವಾ ಲೋಹೀಯ ಘಟಕ ರಹಿತ ದಾರವನ್ನು ಮಾತ್ರ ಗಾಳಿಪಟ ಹಾರಿಸಲು ಅನುಮತಿಸಲಾಗಿದೆ. ಈ ಹಿಂದೆ ನೈಲಾನ್ "ಚೈನೀಸ್" ಮಾಂಜಾಗೆ ಮಾತ್ರ ಸೀಮಿತವಾಗಿದ್ದ ನಿಷೇಧವನ್ನು ಗಾಜಿನ ಅಥವಾ ಲೋಹದ ಪುಡಿ ಲೇಪಿತ ದಾರಗಳಿಗೂ ನಿಷೇಧ ಅನ್ವಯಿಸಲು ಸರ್ಕಾರ ಅಧಿಸೂಚನೆ ಮೂಲಕ ತಿಳಿಸಿದೆ.
ನಿಷೇಧ ಸ್ವಾಗತಿಸಿದ ಪೇಟಾ!
ಗಾಜಿನ ಪುಡಿ ಲೇಪಿತ ಮಾಂಜಾದಾರ ನಿಷೇಧವನ್ನು ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೇಟಾ) ಇಂಡಿಯಾ ಸ್ವಾಗತಿಸಿದ್ದು, ಮಾಂಜಾದಿಂದ ಉಂಟಾದ ಪಕ್ಷಿ ಮತ್ತು ಮಾನವ ಸಾವುಗಳ ತಡೆಯಲು ತಾವು ಮಾಡಿದ್ದ ಮನವಿಯನ್ನು ಅನುಸರಿಸಿ ಕರ್ನಾಟಕ ಸರ್ಕಾರವು ತಿದ್ದುಪಡಿ ಮಾಡಿದೆ ಎಂದು ಹೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ PETA ಇಂಡಿಯಾದ ಹಿರಿಯ ವಕೀಲ ಫರ್ಹತ್ ಉಲ್ ಐನ್, "ನೈಲಾನ್ ಮಾಂಜಾ ಜೊತೆಗೆ ಗಾಜು ಮತ್ತು ಲೋಹದಿಂದ ಬಲಪಡಿಸಲಾದ ಗಾಳಿಪಟದ ದಾರಗಳಿಂದ ಉಂಟಾಗುವ ಅಪಾಯಗಳನ್ನು ಪರಿಹರಿಸಲು ಕರ್ನಾಟಕ ಸರ್ಕಾರವನ್ನು ನಾವು ಪ್ರಶಂಸಿಸುತ್ತೇವೆ" ಎಂದು ಹೇಳಿದರು.
ಅಲ್ಲದೆ "ಈ ನಿರ್ಣಾಯಕ ಕ್ರಮವು ಅಸಂಖ್ಯಾತ ಮಾನವರು ಮತ್ತು ಪ್ರಾಣಿಗಳನ್ನು ಉಳಿಸುತ್ತದೆ, ವಿಮರ್ಶಾತ್ಮಕವಾಗಿ ಅಳಿವಿನಂಚಿನಲ್ಲಿರುವ ರಣಹದ್ದುಗಳು, ಈ ಅಪಾಯಕಾರಿ ಮಾಂಜಾ ದಾರಗಳಿಂದ ಆಗಾಗ್ಗೆ ಅಂಗವಿಕಲವಾಗುತ್ತವೆ. ಸಾಮಾನ್ಯ ಹತ್ತಿ ಗಾಳಿಪಟದ ದಾರಗಳು ಅಥವಾ ಇತರ ರೀತಿಯ ಮನರಂಜನೆಯನ್ನು ಆರಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರೂ ಈ ವಿನಾಶಕಾರಿ ಗಾಯಗಳು ಮತ್ತು ದುರಂತ ಸಾವುಗಳನ್ನು ತಡೆಯಲು ಸಹಾಯ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ನಿಷೇಧ ಕರ್ನಾಟಕದಲ್ಲೇ ಮೊದಲಲ್ಲ
ಇನ್ನು ಮಾಂಜಾದಾರದ ಮೇಲಿನ ನಿಷೇಧ ಕರ್ನಾಟಕದಲ್ಲೇ ಮೊದಲಲ್ಲ. ಈ ಹಿಂದೆ ಚಂಡೀಗಢ, ದೆಹಲಿ, ಗೋವಾ, ಹರಿಯಾಣ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಪಂಜಾಬ್, ತೆಲಂಗಾಣ ಮತ್ತು ತ್ರಿಪುರ ಸರ್ಕಾರಗಳು ಕೂಡ ಇದೇ ರೀತಿಯ ಅಧಿಸೂಚನೆಗಳನ್ನು ಹೊರಡಿಸಿವೆ.
ಮಾಂಜಾ ಮತ್ತು ಅದರ ಎಲ್ಲಾ ರೂಪಗಳು, ಮಾನವರು, ಪಕ್ಷಿಗಳು, ಇತರ ಪ್ರಾಣಿಗಳು ಮತ್ತು ಪರಿಸರವನ್ನು ಅಪಾಯಕ್ಕೆ ತಳ್ಳುತ್ತದೆ. ನೈಲಾನ್ ಅಥವಾ ಹತ್ತಿ ಎಳೆಗಳಿಂದ ಮಾಡಿದ ದಾರಕ್ಕೆ ಮಾಂಜಾ ರಾಸಾಯನಿಕ ಲೇಪನ ಹಚ್ಚಿ ಅದಕ್ಕೆ ಸಾಮಾನ್ಯವಾಗಿ ಗಾಜಿನ ಅಥವಾ ಲೋಹದ ಪುಡಿ ಲೇಪನ ಮಾಡಲಾಗುತ್ತದೆ. ಇದರಿಂದ ದಾರ ಹೆಚ್ಚು ಗಟ್ಟಿಯಾಗುವುದು ಮಾತ್ರವಲ್ಲದೇ ತನ್ನ ಸಂಪರ್ಕಕ್ಕೆ ಬಂದ ಯಾವುದೇ ವಸ್ತುವನ್ನು ಕತ್ತರಿಸುವ ಸಾಮರ್ಥ್ಯ ಪಡೆಯುತ್ತದೆ.
ಗಾಳಿಪಟ ಸ್ಪರ್ಧೆಯಲ್ಲಿ ಇದು ಪರಸ್ಪ ದಾರವನ್ನುಕತ್ತರಿಸಲು ನೆರವಾಗುತ್ತದೆಯಾದರೂ ಬಹುತೇಕ ಪ್ರಕರಣಗಳಲ್ಲಿ ಇಂತಹ ಮಾಂಜಾದಾರಗಳಿಂದ ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಹೆಚ್ಚು ಅಪಾಯಕ್ಕೊಳಗಾಗುತ್ತವೆ. ಮಾತ್ರವಲ್ಲದೇ ಉತ್ತರ ಭಾರತದಲ್ಲಿ ಇಂತಹ ಮಾಂಜಾದಾರಗಳಿಂದ ಸಾಕಷ್ಟು ಮಾನವರೂ ಕೂಡ ಪ್ರಾಣ ಕಳೆದುಕೊಂಡ ಹಲವು ಪ್ರಕರಣಗಳು ವರದಿಯಾಗಿವೆ.
ಇದೇ ವರ್ಷ, ಮಹಾರಾಷ್ಟ್ರದಲ್ಲಿ 21 ವರ್ಷದ ವ್ಯಕ್ತಿ ಇದೇ ಮಾಂಜಾದಾರ ಕತ್ತಿಗೆ ಸಿಲುಕಿ ಕೊಯ್ದು ಸಾವನ್ನಪ್ಪಿದ್ದರು. ಅಂತೆಯೇ ಗುಜರಾತ್‌ನಲ್ಲಿ ನಾಲ್ವರು, ಮಧ್ಯಪ್ರದೇಶದಲ್ಲಿ ಚಿಕ್ಕ ಹುಡುಗ ಮತ್ತು ರಾಜಸ್ಥಾನದಲ್ಲಿ 12 ವರ್ಷದ ಬಾಲಕನ ಕತ್ತು ಇದೇ ಮಾಂಜಾದಾರದಿಂದ ಕತ್ತರಿಸಿ ಹೋಗಿತ್ತು. ಹಾನಿಕಾರಕ ಮಾಂಜಾದಾರದ ಎಳೆಗಳು ಪಕ್ಷಿಗಳ ಜನಸಂಖ್ಯೆಯ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತವೆ. ಮಾಂಜಾ ದಾರ ಆಗಾಗ್ಗೆ ಪಕ್ಷಿಗಳ ರೆಕ್ಕೆಗಳನ್ನು, ಪಾದಗಳನ್ನು ಕತ್ತರಿಸುತ್ತದೆ. ಅನೇಕ ಪ್ರಕರಣಗಳಲ್ಲಿ ಪಕ್ಷಿಗಳು ಇಂತಹ ತೀವ್ರವಾದ ಗಾಯಗಳಿಗೆ ತುತ್ತಾಗಿ ನೆಲಕ್ಕೆ ಅಪ್ಪಳಿಸಿರುವ ಪ್ರಕರಣಗಳೂ ವರದಿಯಾಗಿವೆ.
Advertisement