ಬೆಂಗಳೂರು: ಇಬ್ಬರು ಖ್ಯಾತ ಉದ್ಯಮಿಗಳನ್ನು ಒಳಗೊಂಡ ನಕಲಿ ವಿಡಿಯೋಗಳಿಗೆ ಬಲಿಯಾಗಿ ಸೈಬರ್ ವಂಚಕರಿಗೆ ಸುಮಾರು 95 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿರುವುದಾಗಿ ಬೆಂಗಳೂರಿನ ಇಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಎರಡೂ ಪ್ರಕರಣಗಳಲ್ಲಿ, ದೂರುದಾರರು ನಕಲಿ ವಿಡಿಯೋಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲಿಲ್ಲ ಮತ್ತು ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಕೆಲವು ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮೂಲಕ ಹಣ ಕಳೆದುಕೊಂಡಿದ್ದಾರೆ.
"ದೂರುದಾರರ ಪ್ರಕಾರ, ಸೋಶಿಯಲ್ ಮಿಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರನ್ನು ಒಳಗೊಂಡ ನಕಲಿ ವಿಡಿಯೋಗಳನ್ನು ಬಳಸಿಕೊಂಡು ಮೋಸ ಮಾಡಲಾಗಿದೆ”ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೊದಲ ಪ್ರಕರಣದಲ್ಲಿ, ಬನಶಂಕರಿ ನಿವಾಸಿಯೊಬ್ಬರು ಹೂಡಿಕೆಯ ಮೇಲೆ ಹೆಚ್ಚಿನ ಲಾಭಾಂಶ ಸಿಗಲಿದೆ ಎಂಬ ಜಾಹೀರಾತು ವಿಡಿಯೋವನ್ನು ನೋಡಿ ಮೋಸ ಹೋಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮಹಿಳೆಯ ಪ್ರಕಾರ, ಅವರು ಕೆಲವು ಅನುಮಾನಾಸ್ಪದವಾದ ವೆಬ್‌ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾರೆ ಮತ್ತು ಆಪಾದಿತ ವೇದಿಕೆಯೊಂದಿಗೆ ತಮ್ಮ ವಿವರಗಳನ್ನು ಹಂಚಿಕೊಂಡಿದ್ದಾರೆ. ನಂತರ, ಆಕೆಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ತಾನು ಪ್ಲಾಟ್‌ಫಾರ್ಮ್‌ಗೆ ಸಂಬಂಧಿಸಿದ ಏಜೆಂಟ್ ಎಂದು ಹೇಳಿಕೊಂಡು ಹೆಚ್ಚಿನ ಲಾಭ ಗಳಿಸಲು ಹೆಚ್ಚು ಹೂಡಿಕೆ ಮಾಡುವಂತೆ ಮನವೊಲಿಸಿದ್ದಾರೆ.
ಮಹಿಳೆ ಆರಂಭದಲ್ಲಿ ಸುಮಾರು 1.4 ಲಕ್ಷ ರೂಪಾಯಿ ಹೂಡಿಕೆ ಮಾಡಿ 8,000 ರೂಪಾಯಿ ರಿಟರ್ನ್ಸ್ ಪಡೆದಿದ್ದಾರೆ ಮತ್ತು ಎರಡನೇ ಬಾರಿಗೆ 6.7 ಲಕ್ಷ ರೂಪಾಯಿ ಹೂಡಿಕೆ ಮಾಡಿದಾಗ ಯಾವುದೇ ರಿಟರ್ನ್ಸ್ ಸಿಗಲಿಲ್ಲ ಮತ್ತು ಹೂಡಿಕೆ ಮಾಡಿದ ಹಣವನ್ನೂ ಕಳೆದುಕೊಂಡಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅದೇ ರೀತಿ ಆಕೆ ಮತ್ತೊಂದು ವೇದಿಕೆಯಲ್ಲಿ 67 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡನೆಯ ಪ್ರಕರಣದಲ್ಲಿ, ನಿವೃತ್ತ ಉದ್ಯೋಗಿಯೊಬ್ಬರು ಹೂಡಿಕೆಯ ಮೇಲೆ ಹೆಚ್ಚಿನ ಲಾಭಾಂಶ ಸಿಗಲಿದೆ ಎಂಬ ಜಾಹೀರಾತು ವಿಡಿಯೋಗೆ ಬಲಿಯಾಗಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ವಂಚಕರು ಹಂಚಿಕೊಂಡ ಎರಡು ವಿಭಿನ್ನ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುವ ಮೂಲಕ 19 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಹಣ ವರ್ಗಾವಣೆ ಮಾಡಿದ ನಂತರ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಸಂಬಂಧ ಸಿಇಎನ್(ಸೈಬರ್ ಎಕನಾಮಿಕ್ ಮತ್ತು ನಾರ್ಕೋಟಿಕ್ಸ್) ದಕ್ಷಿಣ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement