ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಟ್ಟಾಡಿಸಿಕೊಂಡು ಬಂದ ಆನೆಯಿಂದ ತಪ್ಪಿಸಿಕೊಳ್ಳಲು ಹೋಗಿ ಕಪಿಲಾ ನದಿಯಲ್ಲಿ ಮುಳುಗಿ ಅರಣ್ಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಕಬಿನಿ ಹಿನ್ನೀರಿನಲ್ಲಿರುವ ಕಾಳೇನಹಳ್ಳಿ ಹಾಡಿಯ ಶಶಾಂಕ್ (22) ಮೃತ ದುರ್ದೈವಿ. ಅರಣ್ಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ಗುತ್ತಿಗೆ ನೌಕರನಾಗಿದ್ದ ಶಶಾಂಕ್ ಅವರು, ಎನ್.ಬೇಗೂರು ಅರಣ್ಯ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಫಾರೆಸ್ಟ್ ಐಬಿ ಸಮೀಪದ ಆರಮಲ್ಲೇಶ್ವರ ಅರಣ್ಯ ಪ್ರದೇಶದಲ್ಲಿ ಅರಣ್ಯ ರಕ್ಷಕರಾದ ಶಶಾಂಕ್ ಪಿ ಸಿ ಮತ್ತು ರಾಜಣ್ಣ ಪಿ ಕಾಲ್ನಡಿಗೆಯಲ್ಲಿ ಗಸ್ತು ತಿರುಗುತ್ತಿದ್ದಾಗ ಸಂಜೆ 4.45ಕ್ಕೆ ಆನೆ ದಾಳಿ ಮಾಡಿದೆ. ಆನೆಯು ದೊಡ್ಡ ಪೊದೆಯೊಂದರ ಹಿಂದೆ ಇದ್ದುದರಿಂದ, ಇದನ್ನು ಗಮನಿಸದ ಅರಣ್ಯ ಸಿಬ್ಬಂದಿ ಸಮೀಪಕ್ಕೆ ಹೋಗಿದ್ದಾರೆ. ಈ ವೇಳೆ ಇದ್ದಕ್ಕಿದ್ದಂತೆ ಬಂದ ಆನೆ ಇಬ್ಬರನ್ನು ಅಟ್ಟಾಡಿಸಿಕೊಂಡು ಬಂದಿದೆ. ಈ ವೇಳೆ ಇಬ್ಬರೂ ಪ್ರಾಣ ಉಳಿಸಿಕೊಳ್ಳಲು ನದಿಗೆ ಹಾರಿದ್ದಾರೆ.
ಬಳಿಕ ರಾಜಣ್ಣ ಅವರು ಈಜಿ ದಡಕ್ಕೆ ಬಂದು ಪ್ರಾಣ ಉಳಿಸಿಕೊಂಡಿದ್ದರೆ, ಶಶಾಂಕ್ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನೆ ಬಳಿಕ ರಾಜಣ್ಣ ಗ್ರಾಮದತ್ತ ಧಾವಿಸಿ ಅರಣ್ಯಾಧಿಕಾರಿಗಳಿಗೆ ಹಾಗೂ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.
ನಂತರ ಆರ್‌ಎಫ್‌ಒ ಅಮೃತೇಶ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ನೀರಿನಿಂದ ಹೊರತೆಗೆಯುವಲ್ಲಿ ಯಶಸ್ವಿಯಾದರು.
ಸ್ಥಳಕ್ಕೆ ಭೇಟಿ ನೀಡಿದ ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಸಂತ್ರಸ್ತ ಕುಟುಂಬಕ್ಕೆ 30 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಶಶಾಂಕ್ ಅವರ ತಾಯಿ ಪ್ರೇಮಾ ಅವರಿಗೆ ತಕ್ಷಣದ ಪರಿಹಾರವಾಗಿ 5 ಲಕ್ಷ ರೂಗಳನ್ನು ನೀಡಿದರು.
Advertisement