ಬೆಂಗಳೂರು: 2026ಕ್ಕೆ ಬೆಂಗಳೂರು ಮೆಟ್ರೋದ ಒಟ್ಟು ವ್ಯಾಪ್ತಿ 175 ಕಿ.ಮೀ ಆಗಲಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬುಧವಾರ ಹೇಳಿದರು. ನಾಗಸಂದ್ರದಿಂದ ಮಾದಾವರ ಮೆಟ್ರೋ ನಿಲ್ದಾಣದವರೆಗಿನ ವಿಸ್ತರಿತ 3.14 ಕಿಮೀ ಮಾರ್ಗವನ್ನು ಇಂದು ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ವರ್ಷಕ್ಕೆ ಇನ್ನೂ 30 ಕಿ.ಮೀ ಸೇರ್ಪಡೆಯಾಗಲಿದ್ದು, 2026ಕ್ಕೆ ಬೆಂಗಳೂರು ಮೆಟ್ರೋದ ಒಟ್ಟು ವ್ಯಾಪ್ತಿ 175 ಕಿ.ಮೀ ಆಗಲಿದೆ ಎಂದರು.
ಯಶವಂತಪುರ ಮೆಟ್ರೋ ನಿಲ್ದಾಣದಿಂದ ನಾಗಸಂದ್ರ- ಮಾದಾವರ ಮಾರ್ಗದಲ್ಲಿ ಡಿಕೆ ಶಿವಕುಮಾರ್ ಪರೀಕ್ಷಾ ಸಂಚಾರ ನಡೆಸಿದರು. ಇವರೊಂದಿಗೆ ಸಂಸದ ತೇಜಸ್ವಿ ಸೂರ್ಯ,ಶಾಸಕ ಮುನಿರಾಜು ಮತ್ತಿತರರು ಉಪಸ್ಥಿತರಿದ್ದರು.
ಮೊದಲ ಹಾಗೂ ಎರಡನೇ ಹಂತದ ಮೆಟ್ರೋ ಮಾರ್ಗವನ್ನು ಪೂರ್ಣಗೊಳಿಸಿದ್ದು, ಮೂರನೇ ಹಂತದ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಹೊಸ ರೈಲುಗಳಿಗಾಗಿ ರಾಜ್ಯ ಸರ್ಕಾರ ಈಗಾಗಲೇ ರೂ. 1,130 ಕೋಟಿ ಪಾವತಿಸಿದೆ ಎಂದು ತಿಳಿಸಿದರು.
ಮಾದಾವರ ಮೆಟ್ರೋ ನಿಲ್ದಾಣದಲ್ಲಿ ಅಂಡರ್‌ಪಾಸ್ ನಿರ್ಮಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಜೊತೆ ಸರ್ಕಾರ ಮಾತುಕತೆ ನಡೆಸುತ್ತಿದೆ. ಮಂಜುನಾಥನಗರ ಮೆಟ್ರೊ ನಿಲ್ದಾಣದಲ್ಲಿ ಪಾದಚಾರಿ ಸ್ಕೈವಾಕ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಯಶವಂತಪುರ ರೈಲು ನಿಲ್ದಾಣದಲ್ಲಿ ಜಂಟಿಯಾಗಿ ಪಾದಚಾರಿ ಮಾರ್ಗ ನಿರ್ಮಿಸಲು ಭಾರತೀಯ ರೈಲ್ವೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
NHAI ಸಹಯೋಗದಲ್ಲಿ ಚಿಕ್ಕಬಿದರಕಲ್ಲು ಅಂಡರ್‌ಪಾಸ್ ಅಭಿವೃದ್ಧಿಪಡಿಸಲು ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಮಾದಾವರ ಮೆಟ್ರೊ ನಿಲ್ದಾಣದಲ್ಲಿ ಅಂಡರ್‌ಪಾಸ್ ನಿರ್ಮಿಸಲು ಚರ್ಚಿಸುತ್ತಿದ್ದೇವೆ. ತುಮಕೂರಿನಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರು ತಮ್ಮ ವಾಹನಗಳನ್ನು ಬಿಇಐಸಿ ಮೈದಾನದಲ್ಲಿ ನಿಲ್ಲಿಸಿ ಮೆಟ್ರೋದಲ್ಲಿ ಸಂಚರಿಸಬಹುದು,ಇದರಿಂದ ದಟ್ಟಣೆಯನ್ನು ತಪ್ಪಿಸಬಹುದು ಎಂದರು.
ನಮ್ಮ ಮೆಟ್ರೋ ಗ್ರೀನ್ ಲೈನ್‌ನ ನಾಗಸಂದ್ರದಿಂದ ಮಾದಾವರವರೆಗೆ 3.14 ಕಿಮೀ ವಿಸ್ತರಿತ ಮಾರ್ಗವನ್ನು ನಾಳೆ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಪ್ರಸ್ತುತ ಹಸಿರು ಮಾರ್ಗವು 33.46 ಕಿಮೀ ಮತ್ತು ನೇರಳೆ ಮಾರ್ಗ 40.5 ಕಿಮೀ ವ್ಯಾಪಿಸಿದೆ .ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ಮೆಟ್ರೋ ಪ್ರಯಾಣಿಕರನ್ನು ಹೊಂದಿದ್ದು, ಮೆಟ್ರೋ ಸೇವೆಯು ನಗರದ ನಿವಾಸಿಗಳಿಗೆ ಪ್ರಯೋಜನಕಾರಿಯಾಗುತ್ತಿದೆ ಎಂದು ಅವರು ಹೇಳಿದರು.
Advertisement