ಬೆಂಗಳೂರು: ಸಂಪೂರ್ಣ ಪೂರ್ಣಗೊಂಡಿರುವ 3.14-ಕಿಮೀ ಮಾದಾವರ-ನಾಗಸಂದ್ರ ಮಾರ್ಗ ಗುರುವಾರ ವಾಣಿಜ್ಯ ಕಾರ್ಯಾಚರಣೆಗೆ ಮುಕ್ತಗೊಳ್ಳುತ್ತಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮೂಲಗಳು ಮಾಹಿತಿ ನೀಡಿವೆ.
ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಕಾರ್ಯಕ್ರಮದ ಮೂಲಕ ರೈಲು ಸಂಚಾರಕ್ಕೆ ದಿನಾಂಕ, ಸಮಯ ನಿಗದಿಯಾಗಿಲ್ಲ. ಹೀಗಾಗಿ ಔಪಚಾರಿಕವಾಗಿ ಗುರುವಾರವೇ ರೈಲು ಸಂಚಾರ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಈ ನಡುವೆ ನಾಗಸಂದ್ರ-ಮಾದವರ ನಡುವಿನ ಮೆಟ್ರೋ ಸಂಚಾರಕ್ಕೆ ತ್ವರಿತ ಅನುಮತಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಂಸದ ತೇಜಸ್ವಿ ಸೂರ್ಯ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಈ ಹಿಂದೆ ತೇಜಸ್ವಿ ಸೂರ್ಯ ಅವರು ಮೆಟ್ರೋ ಮಾರ್ಗ ಸಂಚಾರಕ್ಕೆ ತ್ವರಿತ ಅನುಮತಿ ನೀಡುವ ವಿಚಾರವನ್ನು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮೂಲಕ ಕೇಂದ್ರ ನಗರಾಭಿವೃದ್ದಿ ಸಚಿವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು. ಅಲ್ಲದೆ, ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನೂ ಹಲವು ಬಾರಿ ಭೇಟಿಯಾಗಿ ವಿಸ್ತರಿತ ಹಸಿರು ಮಾರ್ಗದ ತ್ವರಿತ ಕಾರ್ಯಾಚರಣೆಗೆ ಒತ್ತಾಯಿಸಿದ್ದರು.
ಬೆಂಗಳೂರು ಮೆಟ್ರೋ ರೈಲು ನಿಗಮವು ರೇಷ್ಮೆ ಸಂಸ್ಥೆಯಿಂದ ನಾಗಸಂದ್ರವರೆಗೆ ಇದ್ದ ಹಸಿರು ಮಾರ್ಗವನ್ನು ಮಾದಾವರವರೆಗೆ 3.7 ಕಿಲೋ ಮೀಟರ್ ವರೆಗೆ ಒಟ್ಟು 298 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದೆ. ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ರೇಷ್ಮೆ ಸಂಸ್ಥೆ-ನಾಗಸಂದ್ರ ನಡುವೆ ಈಗಾಗಲೇ ನಮ್ಮ ಮೆಟ್ರೋ ರೈಲು ಸಂಚಾರವನ್ನು ನಡೆಸುತ್ತಿದೆ. ಬಿಎಂಆರ್‌ಸಿಎಲ್ ಈ ಮಾರ್ಗವನ್ನು ವಿಸ್ತರಣೆ ಮಾಡಿದ್ದು, ಮಾದಾವರ ತನಕ ಈಗ ಮೆಟ್ರೋ ರೈಲಿನಲ್ಲಿ ಸಂಚಾರವನ್ನು ನಡೆಸಬಹುದಾಗಿದೆ.
ನಾಗಸಂದ್ರ-ಮಾದಾವರ ನಡುವಿನ ವಿಸ್ತರಿತ ಮಾತ್ರ 3.14 ಕಿ. ಮೀ. ಇದೆ. ಇದರಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಜಿಂದಾಲ್ ನಗರ), ಮಾದವರ (ಬಿಐಇಸಿ) 3 ನಿಲ್ದಾಣಗಳಿವೆ. ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾದ ಬಳಿಕ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಜಾಲ 77 ಕಿ. ಮೀ.ಗೆ ವಿಸ್ತರಣೆಯಾಗಲಿದೆ.
2019ರಲ್ಲಿಯೇ ಕಾಮಗಾರಿ ಆರಂಭಿಸಿದ್ದ ಈ ವಿಸ್ತರಣೆ ಮಾರ್ಗದಲ್ಲಿ ಕೆಲಸ ಪೂರ್ಣಗೊಳ್ಳುವುದು ವಿಳಂಬವಾಯಿತು. ನಿರಂತರ ಗಡುವುಗಳ ಮೀರಿದ ನಂತರ ಇದೀಗ ಕಾಮಗಾರಿ ಪೂರ್ಣಗೊಂಡು ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಪರಿಶೀಲಿಸಿ, ವಾಣಿಜ್ಯ ಕಾರ್ಯಾಚರಣೆಗೆ ಅನುಮೋದನೆ ನೀಡಿದ್ದರು.
Advertisement