ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋದ ಗ್ರೀನ್ ಲೈನ್ ನ ನಾಗಸಂದ್ರದಿಂದ ಮಾದಾವರ ವರೆಗಿನ 3.14-ಕಿಮೀ. ವಿಸ್ತರಿತ ಮಾರ್ಗದಲ್ಲಿ ನವೆಂಬರ್ 7 ರಂದು ವಾಣಿಜ್ಯ ಕಾರ್ಯಾಚರಣೆಗೆ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಇಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮೆಟ್ರೋ ಮಾರ್ಗವನ್ನು ಪರಿಶೀಲಿಸಿದರು ಮತ್ತು ಯಶವಂತಪುರ ಮೆಟ್ರೋ ನಿಲ್ದಾಣದಿಂದ ಮಾದಾವರದವರೆಗೆ ಪ್ರಯಾಣಿಸುವ ಮೂಲಕ ನಾಗಸಂದ್ರ - ಮಾದಾವರದವರೆಗಿನ ವಿಸ್ತರಿತ ಮಾರ್ಗಕ್ಕೆ ಪ್ರಾಯೋಗಿಕ ಚಾಲನೆ ನೀಡಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಾಥ್ ನೀಡಿದರು.
ಸದ್ಯ ನಾಗಸಂದ್ರ ನಿಲ್ದಾಣದವರೆಗೂ ಹಸಿರು ಮಾರ್ಗ ಇದ್ದು, ನಾಗಸಂದ್ರದಿಂದ ಮಾದಾವರವರೆಗೂ ಮೆಟ್ರೋ ಮಾರ್ಗ ವಿಸ್ತರಣೆ ಮಾಡಲಾಗಿದೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು, ನಾಗಸಂದ್ರದಿಂದ ಮಾದಾವರ ಮೆಟ್ರೋ ನಿಲ್ದಾಣದವರೆಗಿನ ವಿಸ್ತರಿತ 3.14 ಕಿಮೀ ಮಾರ್ಗವನ್ನು ಇಂದು ಪರಿಶೀಲನೆ ನಡೆಸಿದೆ. ನಾಗರಿಕರನ್ನು ಹೆಚ್ಚು ಕಾಯಿಸುವುದು ಸರಿಯಲ್ಲ ಎನ್ನುವ ಕಾರಣಕ್ಕೆ ಈಗಲೇ ಹೊಸ ಮಾರ್ಗದ ಸೇವೆಯನ್ನು ಆರಂಭಿಸಲಾಗಿದ್ದು, ಸದ್ಯದಲ್ಲೇ ಅಧಿಕೃತವಾಗಿ ಉದ್ಘಾಟಿಸಲಾಗುವುದು ಎಂದು ತಿಳಿಸಿದ್ದಾರೆ.
Advertisement