ರಾಮನಗರ: ಹಾಲಪ್ಪ (ಹೆಸರು ಬದಲಾಯಿಸಲಾಗಿದೆ) ರಾಮನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿರುವ ಇರುಳಿಗ ಗಿರಿಜನ ಕಾಲೋನಿಯಲ್ಲಿ ಮೂರು ಕೋಣೆಗಳ ಸಣ್ಣ ಮನೆಯಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ.
ಅವರ ಮನೆಯ ಮುಂದೆ ಶೌಚಾಲಯವಾಗಬೇಕಿದ್ದ ಚಿಕ್ಕ ಕೋಣೆಯನ್ನು ಹಾಲಪ್ಪ ಅವರ ಕುಟುಂಬ ಅದನ್ನು ಸ್ಟೋರ್ ರೂಂ ಆಗಿ ಬಳಸುತ್ತದೆ. ಇದಕ್ಕೆ ಕಾರಣ ಕಾಲೋನಿ ಕಲ್ಲಿನಿಂದ ನಿರ್ಮಾಣಗೊಂಡಿದೆ, ಸೆಪ್ಟಿಕ್ ಟ್ಯಾಂಕ್ ಗಾಗಿ ಹಳ್ಳವನ್ನು ಅಗೆಯುವುದು ಅಸಾಧ್ಯವಾಗಿದೆ. ಸುಮಾರು 300 ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟು ಜನರು ವಾಸಿಸುವ ಕಾಲೋನಿಯಲ್ಲಿ 74 ಮನೆಗಳ ಬಳಿ ಇದೇ ರೀತಿಯ ಕೊಠಡಿಗಳನ್ನು ನಿರ್ಮಿಸಲಾಗಿದೆ. ಈ ಕೊಠಡಿಗಳನ್ನು ಶೌಚಾಲಯವಾಗಿ ಬಳಸುವ ಬದಲು ಇತರ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಸೆಪ್ಟಿಕ್ ಟ್ಯಾಂಕ್‌ಗಳ ಕೊರತೆಯಿಂದ ಶೌಚಾಲಯಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ, ನಿವಾಸಿಗಳು ಪ್ರತಿದಿನ ಬೆಳಿಗ್ಗೆ ಕಾಲೋನಿಯಿಂದ ಸುಮಾರು ಒಂದು ಕಿಲೋಮೀಟರ್ ನಡೆದು ಪ್ರಕೃತಿಯ ಕರೆಗೆ ಹಾಜರಾಗುತ್ತಾರೆ.
ಶೌಚಾಲಯ ನಿರ್ಮಿಸಿಕೊಳ್ಳಲು ಸರ್ಕಾರ 14 ಸಾವಿರ ರೂ. ನೀಡಿದ. ಆದರೆ ನಮ್ಮ ಕಾಲೋನಿ ಕಲ್ಲಿನ ಮೇಲ್ಮೈಯಲ್ಲಿದ್ದು, ಗುಂಡಿ ತೋಡಲು ಅಡಿಗೆ 3 ಸಾವಿರ ರೂ. ಹಣ ಬೇಕಾಗುತ್ತದೆ. ಸೆಪ್ಟಿಕ್ ಟ್ಯಾಂಕ್‌ಗೆ ಕನಿಷ್ಠ ಎಂಟು ಅಡಿ ಗುಂಡಿ ಬೇಕು, ಅದಕ್ಕಾಗಿ 24 ಸಾವಿರ ರೂ. ಹಣ ಬೇಕಾಗುತ್ತದೆ. ರಾಜ್ಯ ಸರ್ಕಾರದ ಯಾವುದೇ ಸಹಾಯವಿಲ್ಲದೆ, ಕಾಲೋನಿಯಲ್ಲಿ ಶೌಚಾಲಯ ಕೆಲಸ ಅಪೂರ್ಣವಾಗಿ ಉಳಿದಿವೆ ಎಂದು ಹಾಲಪ್ಪ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ಮಳೆ ಬಂದಾಗಲೆಲ್ಲ ಸೋರುವ ಹುಲ್ಲಿನ ಗುಡಿಸಲುಗಳಲ್ಲಿ ಹಲವು ಕುಟುಂಬಗಳು ವಾಸಿಸುತ್ತಿವೆ. ಸರ್ಕಾರದ ವಸತಿ ಯೋಜನೆಗಳ ಅಡಿಯಲ್ಲಿ ಹಣವನ್ನು ಪಡೆದವರು ತಮ್ಮ ಗುಡಿಸಲುಗಳಿಗೆ ಮೂರು ಕೊಠಡಿಗಳನ್ನು ನಿರ್ಮಿಸಿದ್ದಾರೆ, ಲಿವಂಗ್ ರೂಂ, ಮಲಗುವ ಕೋಣೆ ಮತ್ತು ಅಡುಗೆ ಮನೆ ನಿರ್ಮಿಸಿಕೊಂಡಿದ್ದಾರೆ. ಶೌಚಾಲಯವಿಲ್ಲದ ಕಾರಣ ಪ್ರಕೃತಿಯ ಕರೆಗೆ ಮಹಿಳೆಯರು ಮೈಲುಗಟ್ಟಲೆ ನಡೆದುಕೊಂಡು ಹೋಗಬೇಕಾಗಿದೆ. ಪುರುಷರಂತೆ ನಾವು ಕಾಲೋನಿಗೆ ಹತ್ತಿರವಿರುವ ಸ್ಥಳವನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ನಾವು ಸಾಮಾನ್ಯವಾಗಿ ದೂರದ ಪ್ರದೇಶಕ್ಕೆ ಹೋಗುತ್ತೇವೆ, ಆದರೆ ಮಳೆ ಬಂದಾಗ ಆ ಸ್ಥಳವನ್ನು ತಲುಪಲು ಕಷ್ಟವಾಗುತ್ತದೆ ಎಂದು ಕಾಲೋನಿಯ ಮಹಿಳೆಯೊಬ್ಬರು ಹೇಳಿದ್ದಾರೆ.
ಕಲ್ಲಿನ ಮೇಲ್ಮೈಯಿಂದಾಗಿ ಕಾಲೋನಿಗೆ ಒಳಚರಂಡಿ ವ್ಯವಸ್ಥೆ ಇಲ್ಲ ಎಂದು ಇನ್ನೊಬ್ಬ ಮಹಿಳೆ ತಿಳಿಸಿದ್ದಾರೆ. ಇರುಳಿಗ ಬುಡಕಟ್ಟು ಜನರು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ತಮಿಳುನಾಡು ಮತ್ತು ಕೇರಳದಲ್ಲೂ ಕಂಡುಬರುತ್ತಾರೆ. ಐತಿಹಾಸಿಕವಾಗಿ, ಅವರು ಆಹಾರಕ್ಕಾಗಿ ಬೇಟೆಯಾಡುವುದು ಮತ್ತು ಸಣ್ಣ ಅರಣ್ಯ ಉತ್ಪನ್ನಗಳ ಮೇಲೆ ಅವಲಂಬಿತರಾಗಿದ್ದರು, ಆದರೆ ಬೇಟೆಯಾಡುವುದನ್ನು ನಿಷೇಧಿಸಿದ್ದರಿಂದ, ಅವರು ಈಗ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ ಮತ್ತು ಹತ್ತಿರದ ಪಟ್ಟಣಗಳಲ್ಲಿ ಉದ್ಯೋಗ ಮಾಡುತ್ತಾರೆ.
ಆದರೆ ಈ ಜನರು ಸ್ಮಾರ್ಟ್‌ಫೋನ್‌ಗಳು ಮತ್ತು ಡಿಶ್ ಟಿವಿಗಳನ್ನು ಹೊಂದಿದ್ದಾರೆ. ಕಾಲೋನಿಯಲ್ಲಿ ರಾಜ್ಯ ಸರ್ಕಾರ 32 ಸಮುದಾಯ ಶೌಚಾಲಯಗಳನ್ನು ನಿರ್ಮಿಸಿದೆ, ಆದರೆ ನಿವಾಸಿಗಳು ಬಳಸುತ್ತಿಲ್ಲ. ಏಕೆಂದರೆ “ಈ ಶೌಚಾಲಯಗಳು ತುಂಬಾ ಚಿಕ್ಕದಾಗಿದ್ದು, ಒಬ್ಬ ವ್ಯಕ್ತಿ ಒಳಗೆ ಕುಳಿತುಕೊಳ್ಳಲು ಕಷ್ಟವಾಗುತ್ತದೆ. ಇಷ್ಟು ಚಿಕ್ಕ ಶೌಚಾಲಯವನ್ನು ಯಾರಾದರೂ ಹೇಗೆ ಬಳಸುತ್ತಾರೆ? ಎಂದು ಮಣಿಯಮ್ಮ (ಹೆಸರು ಬದಲಾಯಿಸಲಾಗಿದೆ) ಎಂಬುವರು ಪ್ರಶ್ನಿಸಿದ್ದಾರೆ. ಈ ಅಲೆಮಾರಿ ಜನರು ಕೆಲವು ವರ್ಷಗಳ ಹಿಂದೆ ಬಂದು ಇಲ್ಲಿ ನೆಲೆಸಿದ್ದರು ಎಂದು ಅಧಿಕಾರಿಯೊಬ್ಬರು ವಿವರಿಸಿದರು. “ಅವರು ತಮ್ಮ ಕಾಲೋನಿಯಿಂದ ತಿಂಗಳುಗಟ್ಟಲೆ ದೂರ ಇರುತ್ತಾರೆ. ಒದಗಿಸಿದ ಸೌಕರ್ಯಗಳನ್ನು ಬಳಸಿಕೊಳ್ಳುವಂತೆ ಅವರಿಗೆ ಅರಿವು ಮೂಡಿಸುವುದು ನಮಗೆ ತುಂಬಾ ಕಷ್ಟಕರವಾಗಿದೆ. ಅವರು ಮಲವಿಸರ್ಜನೆಗೆ ತೆರೆದ ಜಾಗಕ್ಕೆ ಹೋಗಲು ಆದ್ಯತೆ ನೀಡುತ್ತಾರೆ. ಅವರ ಸಮುದಾಯ ಶೌಚಾಲಯಗಳ ಬಾಗಿಲುಗಳನ್ನು ತಮ್ಮ ಗುಡಿಸಲುಗಳಿಗೆ ಹಾಕಿಕೊಳ್ಳು ಬಾಗಿಲುಗಳನ್ನು ಸಹ ತೆಗೆದುಕೊಂಡು ಹೋಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಲವು ಆದಿವಾಸಿಗಳು ಪಡಿತರ ಅಥವಾ ಆಧಾರ್ ಕಾರ್ಡ್ ಅಥವಾ ಜಾತಿ ಪ್ರಮಾಣಪತ್ರಗಳನ್ನು ಹೊಂದಿಲ್ಲದ ಕಾರಣ ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಹೇಳಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ರಾಮನಗರದಲ್ಲಿರುವ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಅವರು ಶೀಘ್ರದಲ್ಲೇ ಕಾಲೋನಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ಅಗತ್ಯ ಸೌಕರ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳುವುದಾಗಿ ಹೇಳಿದರು.
Advertisement