ಕಲಗಡ್ಡ (ಉತ್ತರ ಕನ್ನಡ): ಗ್ರಾಮಕ್ಕೆ ನುಗ್ಗಿ ಅಪಾರ ಪ್ರಮಾಣದ ಬೆಳೆಗಳನ್ನು ಹಾನಿಗೊಳಿಸಿದ್ದ ಆನೆಯನ್ನು ಗ್ರಾಮಸ್ಥರು ಒಗ್ಗಟ್ಟಿನಿಂದ ಹಿಮ್ಮೆಟ್ಟಿಸಿರುವ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದೆ.
ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲಗಡ್ಡಕ್ಕೆ ಮಧ್ಯರಾತ್ರಿ ನುಗ್ಗಿರುವ ಆನೆ, ಗ್ರಾಮದಲ್ಲಿದ್ದ ಬೆಳೆಗಳಿಗೆ ಹಾನಿಯುಂಟು ಮಾಡುತ್ತಿತ್ತು. ಇದನ್ನು ಕಂಡ ವ್ಯಕ್ತಿಯೊಬ್ಬರು ಕೂಡಲೇ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.
ಆನೆ ಬಂದಿರುವುದು ಗ್ರಾಮಸ್ಥರಲ್ಲಿ ಕುತೂಹಲ ಸೃಷ್ಟಿಸಿತ್ತು. ಆದರೆ, ಬೆಳೆ ನಾಶವಾಗುತ್ತಿರುವುದನ್ನು ಕಂಡ ಅವರು, ಕೈಗೆ ಸಿಕ್ಕ ಸಿಕ್ಕ ವಸ್ತುಗಳಿಂದ ಶಬ್ದ ಮಾಡಿ, ಆನೆಯನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆನೆಯನ್ನು ಕಾಡಿಗೆ ಓಡಿಸಿದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಲಾಗಿತ್ತು. ಬಳಿಕ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು ಎಂದು ಗ್ರಾಮಸ್ಥ ನವೀನ್ ನಾಯ್ಕ ಅವರು ಹೇಳಿದ್ದಾರೆ.
ಈ ಭಾಗದಲ್ಲಿ ಆನೆಗಳ ಓಡಾಟ ಸಾಮಾನ್ಯ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಒಂಟಿ ಸಲಗ ಕಾಣಿಸಿಕೊಂಡಿರುವುದು ಇದೇ ಮೊದಲು ಎಂದು ಗ್ರಾಮಸ್ಥರು ಹೇಳಿದ್ದಾರೆ.
Advertisement