ಬೆಂಗಳೂರು: ನಗರದ ಬಿಟಿಎಂ ಲೇಔಟ್‌ನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯುವತಿಯೊಬ್ಬಳ ಎದೆ ಸ್ಪರ್ಶಿಸಿ ಅಪ್ರಾಪ್ತ ಬಾಲಕನೊಬ್ಬ ಕಿರುಕುಳ ನೀಡಿರುವ ಘಟನೆಯೊಂದು ಸದ್ದುಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಸಂತ್ರಸ್ತ ಯುವತಿಯನ್ನು ನೇಹಾ ಬಿಸ್ವಾಲ್ ಅವರು ಈ ಕುರಿತ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಕಣ್ಣೀರಿಟ್ಟಿದ್ದಾರೆ.
ಕೆಲಸ ಮುಗಿಸಿ ಮನೆಗೆ ಮರಳುವಾಗ ಓರ್ವ ಹುಡುಗ ಸೈಕಲ್‌ನಲ್ಲಿ ಬಂದಿದ್ದು ಆಕೆಯ ಎದೆಯನ್ನು ಮುಟ್ಟಿದ್ದಾನೆ. ಇದೇ ಸಮಯದಲ್ಲಿ ನೇಹಾ ವಿಡಿಯೋ ಬ್ಲಾಗ್ ರೆಕಾರ್ಡ್ ಮಾಡುತ್ತಿದ್ದು, ವಿಡಿಯೋ ಕ್ಯಾಮರಾದಲ್ಲಿ ದಾಖಲಾಗಿದೆ.
ವ್ಲಾಗ್ ಮಾಡುತ್ತಿದ್ದಾಗ ಹುಡುಗನಿಂದ ಕಿರುಕುಳ ಅನುಭವಿಸಿದೆ ಎಂದು ವ್ಲಾಗರ್ ನೇಹಾ ಹೇಳಿದ್ದಾರೆ. ನಾನು ವ್ಲಾಗ್ ಮಾಡುತ್ತಿದ್ದೆ. ಈ ವೇಳೆ ಒಬ್ಬ ಹುಡುಗ ಸೈಕಲ್ ಓಡಿಸುತ್ತಾ ನನ್ನ ಮುಂದೆ ಹಾದು ಹೋದನು. ಇದೇ ಸಂದರ್ಭದಲ್ಲಿ ನನ್ನನ್ನು ನೋಡಿ ಯು-ಟರ್ನ್ ತೆಗೆದುಕೊಂಡು ನನ್ನ ಕಡೆಗೆ ಬರಲು ಪ್ರಾರಂಭಿಸಿದನು. ಮೊದಲಿಗೆ ಆತ ನನ್ನನ್ನು ಗೇಲಿ ಮಾಡಿದನು. ನನ್ನನ್ನು ಕ್ಯಾಮೆರಾದಲ್ಲಿ ಅನುಕರಿಸಿದನು. ಅಲ್ಲದೆ, ನನ್ನ ಎದೆಯನ್ನು ಮುಟ್ಟಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದನು. ಬಳಿಕ ಆ ಬಾಲಕ ಓಡಿಹೋಗಲು ಯತ್ನಿಸಿದ. ಆದರೆ, ಜನರು ಅವನನ್ನು ಹಿಡಿದರು. ಆ ಹುಡುಗನಿಗೆ ಹತ್ತು ವರ್ಷ. ಅವನು ಬಾಲಕನಾಗಿದ್ದರಿಂದ ಜನರು ಅವನನ್ನು ಕ್ಷಮಿಸುವಂತೆ ಕೇಳಿದರು.
ಬೈಸಿಕಲ್ನಲ್ಲಿ ಹೋಗುವಾಗ ಆಕಸ್ಮಾತ್ ಬ್ಯಾಲೆನ್ಸ್ ತಪ್ಪಿ ಸ್ಪರ್ಶಿಸಿದೆ ಹೊರತು ಬೇಕಂತಲೇ ಮುಟ್ಟಿದ್ದಲ್ಲ ಎಂದು ಬಾಲಕ ಹೇಳಿದ. ಆದರೆ, ವಿಡಿಯೋ ರೆಕಾರ್ಡ್ ಆಗಿದ್ದು, ಉದ್ದೇಶಪೂರ್ಕವಾಗಿಯೇ ಮಾಡಿದ್ದಾನೆಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ. ಎಂದು ಹೇಳಿದೆ. ಬಾಲಕನಾಗಿದ್ದರಿಂದ ಆತನನ್ನು ಕ್ಷಮಿಸು ಎಂದು ಅನೇಕರು ಕೇಳಿದರು. ಆದರೆ, ಅದಕ್ಕೆ ನಾನು ಒಪ್ಪಲಿಲ್ಲ. ಬಾಲಕನಿಗೆ ಹೊಡೆದು ಬುದ್ಧಿಮಾತು ಹೇಳಿ ಕಳುಹಿಸಿದೆ ಎಂದು ನೇಹಾ ಹೇಳಿದ್ದಾರೆ.
ಈ ವಿಡಿಯೊವನ್ನು@karnatakaportf ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ವಿಡಿಯೋ ವೈರಲ್ ಆಗಿದೆ. ಅಲ್ಲದೆ, ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಈ ನಡುವೆ ದೂರು ನೀಡಲು ಯುವತಿ ನಿರಾಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement