ಬೆಂಗಳೂರು: ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ನಕಲು ಮಾಡುತ್ತಿದ್ದು, ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ತನ್ನ ಚುನಾವಣಾ ಸುಳ್ಳು ಭರವಸೆಗಳಾಗಿ ಘೋಷಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಆರೋಪಿಸಿದ್ದಾರೆ.
ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಖರ್ಗೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಲವಾಗಿ ಸಮರ್ಥಿಸಿಕೊಂಡರು. ತಮ್ಮ ಪಕ್ಷ ಯಾವಾಗಲೂ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಲಿದ್ದು, ನೀಡಿದ ಭರವಸೆಗಳನ್ನು ಜಾರಿಗೊಳಿಸುತ್ತದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಪ್ರಧಾನಿ ಮೋದಿ ಅವರ ಟೀಕೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ಜಾರ್ಖಂಡ್ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿಯವರಿಗೆ ವಿವರವಾಗಿ ಪ್ರತಿಕ್ರಿಯಿಸಿದ್ದೇನೆ. ಈಗಲೂ ಕರ್ನಾಟಕ ರಾಜ್ದ ಬಜೆಟ್ ಅಧ್ಯಯನ ಮಾಡುವಂತೆ ಹೇಳುತ್ತೇನೆ. ಪಂಚ ಗ್ಯಾರಂಟಿಗಳ ಅನುಷ್ಟಾನಕ್ಕಾಗಿ ರೂ.52,000 ಕೋಟಿ ಮೀಸಲಿಡಲಾಗಿದೆ. ಇದರಲ್ಲಿ ಶೇ. 47 ರಷ್ಟು ಈಗಾಗಲೇ ವೆಚ್ಚವಾಗಿದೆ. ಬಹುಶ: ಬಿಜೆಪಿಯವರು ಬಜೆಟ್ ನೋಡಿಲ್ಲ ಎಂದರು.
ಯಾವುದೇ ಸರಿಯಾದ ಬಜೆಟ್ (ಹಂಚಿಕೆ) ಇಲ್ಲದೆ ಬಿಜೆಪಿ ಈಗ ಹಲವಾರು ಘೋಷಣೆಗಳನ್ನು ಮಾಡಿದೆ. ಕರ್ನಾಟಕದಲ್ಲಿ ನಾವು ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್ ರಾಜಸ್ಥಾನ ಮತ್ತು ಇತರ ಸ್ಥಳಗಳಲ್ಲಿ ಘೋಷಣೆ ಮಾಡಿದ್ದಾರೆ. ಕರ್ನಾಟಕ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿಯವರು ಅಪ ಪ್ರಚಾರ ನಡೆಸುತ್ತಿದ್ದು, ಇದಕ್ಕೆ ಯಾರೂ ಕಿವಿಗೊಡಬಾರದು. ಅವರು ನಮ್ಮ ಭರವಸೆಗಳನ್ನು ನಕಲು ಮಾಡಿದ್ದಾರೆ. ನಾವು ಭರವಸೆ ನೀಡಿದ ಕನಿಷ್ಠ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಮತ್ತು ಮೋದಿ ನೀಡಿದ್ದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ವಿದೇಶದಿಂದ ಕಪ್ಪುಹಣ ವಾಪಸ್ ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ವರ್ಗಾವಣೆ, 2 ಕೋಟಿ ಉದ್ಯೋಗ ಸೃಷ್ಟಿ. ಬುಲೆಟ್ ರೈಲು ಮತ್ತಿತರ ಭರವಸೆಗಳೆಲ್ಲವೂ ಜುಮ್ಲಾಗಳಾಗಿವೆ. ಬಿಜೆಪಿ ನಾಯಕರು ಚುನಾವಣೆಗಾಗಿ ಮಾತನಾಡುತ್ತಾರೆ. ಆದರೆ ಕಾಂಗ್ರೆಸ್ ಯಾವಾಗಲೂ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ವಕ್ಫ್ ಸಂಬಂಧಿತ ವಿವಾದದ ಪ್ರಶ್ನೆಗೆ ನೇರವಾಗಿ ಪ್ರತಿಕ್ರಿಯಿಸದ ಖರ್ಗೆ, ಇದರಲ್ಲಿ ನನ್ನ ಪಾತ್ರವಿಲ್ಲ, ನಾನು ಮಾತನಾಡಲಾರೆ. ಜಂಟಿ ಆಯ್ಕೆ ಸಮಿತಿಯ ವರದಿ ಸಂಸತ್ತಿಗೆ ಬಂದ ನಂತರ ನಾವು ಅದರ ಬಗ್ಗೆ ಮಾತನಾಡಬಹುದು ಎಂದರು.
ಮಹಾರಾಷ್ಟ್ರ ಚುನಾವಣೆಗೆ ಮುನ್ನ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಪಾವಿತ್ರ್ಯದ ಬಗ್ಗೆ ವ್ಯಕ್ತವಾಗುತ್ತಿರುವ ಅನುಮಾನಗಳ ಕುರಿತು ಪ್ರತಿಕ್ರಿಯಿಸಿದ ಖರ್ಗೆ, “ನಾನು ಅದರ ಬಗ್ಗೆ ಪದೇ ಪದೇ ಮಾತನಾಡಲು ಬಯಸುವುದಿಲ್ಲ. ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ ಅವರಂತಹ ನಾಯಕರು ಒಳಗೊಂಡಂತೆ ಇವಿಎಂಗಳ ಬಗ್ಗೆ ನಮ್ಮ ತಂಡವಿದೆ. ಅನೇಕರು ಅದರ ಮೇಲೆ ಕೆಲಸ ಮಾಡುತ್ತಿದ್ದಾರೆ. ನೋಡೋಣ ಎಂದರು.
Advertisement