ಬೆಂಗಳೂರು: ಕರ್ತವ್ಯ ನಿರತ BMTC ಚಾಲಕನಿಗೆ ಅಪರಿಚಿತ ವ್ಯಕ್ತಿಯೋರ್ವ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಭಾನುವಾರ ರಾತ್ರಿ 8 ಗಂಟೆ ಸುಮಾರಿನಲ್ಲಿ ಬಸ್ ಜಯನಗರದಿಂದ ವಿಜಯನಗರಕ್ಕೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಬಸ್ ಹಳೇಗುಡ್ಡದಹಳ್ಳಿ ಸಿಗ್ನಲ್ ಬಳಿ ನಿಂತಿದ್ದಾಗ ಅದರ ಪಕ್ಕ ಬೈಕ್ ನಿಲ್ಲಿಸಿದ ವ್ಯಕ್ತಿ, ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಂತರ ಆ ವ್ಯಕ್ತಿ ಬಸ್ ಹತ್ತಿ ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾನೆ.
ಹಠಾತ್ ದಾಳಿ ಹೊರತಾಗಿಯೂ ಚಾಲಕ ಮುರ್ತುಜಾ ಇಮಾಮ್ ಸಾಬ್ ತ್ವರಿತವಾಗಿ ಬಸ್ ಬಾಗಿಲು ಲಾಕ್ ಮಾಡಿದ್ದು, ಪ್ರಯಾಣಿಕರ ನೆರವಿನಿಂದ ಹಲ್ಲೆ ನಡೆಸಿದ ವ್ಯಕ್ತಿಯನ್ನು ಹಿಡಿದು ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು, ಅಲ್ಲಿ ಅಪರಿಚಿತನ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ಚಾಲಕ ಇಮಾಮ್ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾಗಿ BMTC ತಿಳಿಸಿದೆ.
ಚಾಲಕ ಮತ್ತು ವ್ಯಕ್ತಿಯ ನಡುವಿನ ತಪ್ಪು ಸಂವಹನದಿಂದ ಈ ಘಟನೆ ನಡೆದಿದೆ. ಇದು ವಾಗ್ವಾದಕ್ಕೆ ಕಾರಣವಾಗಿದ್ದು, ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲಾಗಿದೆ. ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನಿಗಮ ತನ್ನ ಸಿಬ್ಬಂದಿ ಮತ್ತು ಪ್ರಯಾಣಿಕರ ಸುರಕ್ಷತೆ ಮತ್ತು ಯೋಗಕ್ಷೇಮ ಖಾತ್ರಿಗೆ ಬದ್ಧವಾಗಿದೆ. ಸಿಬ್ಬಂದಿ ಸದಸ್ಯರ ಮೇಲಿನ ಹಿಂಸಾಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ ಮತ್ತು ಆಡಳಿತವು ಪ್ರತಿ ಹಂತದಲ್ಲೂ ಭರವಸೆ ನೀಡುತ್ತದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
Advertisement