ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಕಲಿ ಕ್ಯಾಬ್ ಹತ್ತಿದ ಮಹಿಳಾ ಡಾಕ್ಟರ್ ಗೆ ತಾನೂ ವಂಚನೆಗೆ ಒಳಗಾಗುತ್ತಿರುವ ಅನುಭವವಾಗಿದ್ದು, ಕೂಡಲೇ ತುರ್ತು ಸಹಾಯವಾಣಿ 112 ಸಂಪರ್ಕಿಸುವ ಮೂಲಕ ಸಂಭಾವ್ಯ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಸಂಬಂಧ ವಿಮಾನ ನಿಲ್ದಾಣದಲ್ಲಿ ದೂರು ದಾಖಲಿಸಿದ್ದು, ಚಾಲಕ ಬಸವರಾಜನನ್ನು ಪೊಲೀಸರು ಬಂಧಿಸಿದ್ದಾರೆ.
ನವೆಂಬರ್ 9 ರಂದು ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದ್ದ ಮಹಿಳೆ, @BLR Airport ಒಲಾ ಪಿಕಪ್ ಸ್ಟೇಷನ್ ನಲ್ಲಿ ಯಾರೋ ಒಬ್ಬ ಕ್ಯಾಬ್ ಡ್ರೈವರ್ ನಿಂದ ನಾನು ಸಂಭಾವ್ಯ ಕಳ್ಳ ಸಾಗಣೆ/ ಅತ್ಯಾಚಾರ/ ಲೂಟಿ/ ಹಲ್ಲೆಯಿಂದ ತಪ್ಪಿಸಿಕೊಂಡೆ. ರಾತ್ರಿ 10-30ಕ್ಕೆ BLR ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಇದು ನಡೆಯಿತು. ನಾನು 112 ಗೆ ಕರೆ ಮಾಡದೇ ಇದ್ದಲ್ಲಿ ಇದನ್ನು ಟೈಪ್ ಮಾಡಲು ನಾನು ಇರುತ್ತಿರಲಿಲ್ಲ ಎಂದು ಬರೆದುಕೊಂಡಿದ್ದರು.
ಈ ಫೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 2.5 ಮಿಲಿಯನ್ ವೀಕ್ಷಣೆ ಕಂಡಿದ್ದು, ಜನರು ಹೆಚ್ಚಿನ ಚರ್ಚೆ ನಡೆಸಿದ್ದಾರೆ.
ಅಸಲಿಗೆ ಆದದ್ದು ಏನು?
ಘಟನೆ ನಡೆದ ಒಂದು ದಿನದ ಬಳಿಕ ಪೊಲೀಸರಿಗೆ ದೂರು ನೀಡಿದ ಮಹಿಳೆ, ದೆಹಲಿಯಿಂದ ವಿಮಾನ ನಿಲ್ದಾಣದ ಟರ್ಮಿನಲ್ 1ಕ್ಕೆ ಬಂದು ತನ್ನ ಫೋನ್ ನಲ್ಲಿ ಒಲಾ ಬುಕ್ಕಿಂಗ್ ಮಾಡಿದೆ. ಕೂಡಲೇ ಬಂದ ಬಸವರಾಜ ಡ್ರಾಪ್ ಮಾಡುವುದಾಗಿ ಹೇಳಿದ. ನಂತರ ಎಲ್ಲಿಗೆ ಕರೆದೊಯ್ಯಬೇಕು ಎಂದು ಕೇಳಿದ. ಬಳಿಕ ಕಾರಿಗೆ ಹತ್ತಿಸಿಕೊಂಡ ಚಾಲಕ ಒಲಾ OTP ನಂಬರ್ ಕೇಳಲಿಲ್ಲ. ನಾನು OTP ಬಗ್ಗೆ ಕೇಳುತ್ತಿದ್ದರೂ ಆತ ಪ್ರತಿಕ್ರಿಯಿಸುತ್ತಿರಲಿಲ್ಲ. 700 ಮೀಟರ್ ದೂರ ಸಾಗಿದ ಬಳಿಕ ಫೋನ್ ನಲ್ಲಿ ಲೋಕೇಷನ್ ಎಂಟರ್ ಮಾಡುವಂತೆ ಹೇಳಿದ್ದರಿಂದ ಹಾಗೆ ಮಾಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ದರ ತೋರಿಸುವ ಆ್ಯಪ್ ನಲ್ಲಿ ರೂ.1,300 ತೋರಿಸುತಿತ್ತು ಆದರೆ, ಚಾಲಕ ರೂ.1,500 ಕೊಡುವಂತೆ ಕೇಳಿದ. ಅಷ್ಟು ಹಣಪಾವತಿಸಲು ನಿರಾಕರಿಸಿ, ಮತ್ತೆ ಒಲಾ ಪಿಕ್ ಆಪ್ ನಿಲ್ದಾಣಕ್ಕೆ ಕರೆದೊಯ್ಯುವಂತೆ ಹೇಳಿದರೂ ಕೇಳದೆ ಮುಂದೆ ಕಾರು ಚಲಾಯಿಸಿಕೊಂಡ ಹೋದ ಚಾಲಕ, ತನ್ನ ಸ್ನೇಹಿತ ಮಿನಿ ಕಾರಿನಲ್ಲಿ ಬರಲಿದ್ದು, ರೂ. 1300 ರೂ. ಕೊಡುವಂತೆ ಕೇಳಿದ್ದಾನೆ. ನಂತರ ಪೆಟ್ರೋಲ್ ಬಂಕ್ ಬಳಿ ಕಾರು ನಿಲ್ಲಿಸಿದ್ದು, ಇಂಧನಕ್ಕಾಗಿ ರೂ. 500 ಪಾವತಿಸುವಂತೆ ಹೇಳಿದ್ದಾನೆ. ಇದರಿಂದ ಆತಂಕಕ್ಕೊಳಗಾದ ವೈದ್ಯೆ ಕುಟುಂಬ ಸದಸ್ಯರೊಂದಿಗೆ ತಾನಿದ್ದ ಸ್ಥಳವನ್ನು ಹಂಚಿಕೊಂಡಿದ್ದು,112 ಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ. 20 ನಿಮಿಷಗಳಲ್ಲಿಯೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಚಾಲಕನನ್ನು ವಶಕ್ಕೆ ಪಡೆದರು ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.
Advertisement