ಬೆಂಗಳೂರು: ರಾಜ್ಯದಲ್ಲಿ ವಸತಿ, ವಾಣಿಜ್ಯ ಮತ್ತು ಕೃಷಿ ಭೂಮಿ ಸೇರಿದಂತೆ ಎಲ್ಲಾ ರೀತಿಯ ಆಸ್ತಿಗಳ ನೋಂದಣಿಗೆ ಇ-ಖಾತಾಗಳನ್ನು ರಾಜ್ಯ ಸರ್ಕಾರ ಕಡ್ಡಾಯ ಮಾಡಿದೆ.
ಸ್ಥಿರಾಸ್ತಿಗಳ ನೋಂದಣಿಗಾಗಿ ಗ್ರಾಮಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತೆಗಳನ್ನು ವಿತರಿಸುವ ಸಂಬಂಧ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಪೌರಾಡಳಿತ ಸಚಿವ ರಹೀಂ ಖಾನ್ ನೇತೃತ್ವದಲ್ಲಿ ಬುಧವಾರ ವಿಕಾಸಸೌಧದಲ್ಲಿ ಸಭೆ ನಡೆಯಿತು.
ಈ ವೇಳೆ ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಸ್ತಿಗಳ ನೋಂದಣಿಗೆ ಇ-ಖಾತಾಗಳನ್ನು ತ್ವರಿತವಾಗಿ ವಿತರಿಸುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಎಲ್ಲಾ ಆಸ್ತಿಗಳಿಗೂ ಇ–ಖಾತಾ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈಗಿರುವ ಪ್ರಕ್ರಿಯೆಯಲ್ಲಿ ಇರುವ ಲೋಪಗಳನ್ನು ಸರಿಪಡಿಸಲಾಗುತ್ತಿದೆ. ಇ–ಖಾತಾ ಕಡ್ಡಾಯಗೊಳಿಸಿರುವುದರಿಂದ ನಕಲಿ ಖಾತೆಗಳನ್ನು ಸೃಷ್ಟಿಸಿ ಅಕ್ರಮ ಎಸಗುವುದು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರಲಿದೆ ಎಂದು ಹೇಳಿದರು.
ಮಲೆನಾಡು ಪ್ರದೇಶದಲ್ಲಿ ವಿಶೇಷವಾಗಿ ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಖಾತಾ ವಿತರಿಸುವಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಠಾಣಾ ವ್ಯಾಪ್ತಿಯ ವಿಸ್ತರಣೆ ಮುಂತಾದ ಸಮಸ್ಯೆಗಳಿಗೂ ಪರಿಹಾರೋಪಾಯಗಳನ್ನು ಶಿಫಾರಸು ಮಾಡುವಂತೆ ಕಾರ್ಯಪಡೆ ಅಧ್ಯಕ್ಷರಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರಲ್ಲದೆ, ಖಾತಾ ವಿತರಿಸುವಲ್ಲಿ ಭವಿಷ್ಯದಲ್ಲಿ ಎದರಾಗುವ ಸಮಸ್ಯೆಗಳೂ ಸೇರಿದಂತೆ ಈಗ ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸೂಚಿಸುವಂತೆ ನಿರ್ದೇಶನ ನೀಡಿದರು.
ಮಹಾನಗರ ಪಾಲಿಕೆಗಳಲ್ಲಿ ನೀಡುತ್ತಿರುವ ಟಿಡಿಆರ್ಗಳನ್ನು ಪುನರ್ ಉಪಯೋಗಿಸದಂತೆ ತಡೆಯಲು, ಟಿಡಿಆರ್ಗಳಿಗೂ ಸಹ ಇ-ಖಾತೆಯನ್ನು ವಿತರಿಸಬೇಕು ಎಂದು ಹೇಳಿದರು.
ಸ್ಥಿರಾಸ್ತಿಗಳ ಸಂಬಂಧ ದಸ್ತಾವೇಜುಗಳ ನೋಂದಣಿಗಾಗಿ ಕಾವೇರಿ-2 ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶ ಮತ್ತು ಇ-ಸ್ವತ್ತು ತಂತ್ರಾಂಶವನ್ನು 2014ರಿಂದಲೇ ಸಂಯೋಜನೆಗೊಳಿಸಿದ್ದು, ನೋಂದಣಿಗಾಗಿ ಇ - ಖಾತಾ ಕಡ್ಡಾಯವಾಗಿರುತ್ತದೆ. ಹಾಗಾಗಿ, ಸಾರ್ವಜನಿಕರಿಗೆ ದಸ್ತಾವೇಜು ನೋಂದಣಿಗಾಗಿ ಇ-ಖಾತಾ ತುರ್ತಾಗಿ ವಿತರಿಸಬೇಕು. ಮಂಗಳೂರು ಮತ್ತು ಇತರ ಕೆಲವು ಕಡೆ ವಿತರಿಸುತ್ತಿರುವ ಇ-ಆಸ್ತಿ ಖಾತೆಗಳಲ್ಲಿ ಸ್ಥಿರಾಸ್ತಿಯ ಅಳತೆಯ ವಿವರಗಳು ನಮೂದಾಗದೇ ಇರುವುದರಿಂದ, ಕಾವೇರಿ-2 ತಂತ್ರಾಂಶದಲ್ಲಿ ನೋಂದಣಿಗೆ ಸಮಸ್ಯೆಯಾಗುತ್ತಿದ್ದು, ಸಮಸ್ಯೆಯನ್ನು ದೂರಾಗಿಸಬೇಕಿದೆ.
ಕೃಷಿ ಜಮೀನು ಭೂ ಪರಿವರ್ತನೆ ನಂತರ ನಿವೇಶನ ಬಿಡುಗಡೆಗೊಳಿಸುವ ಪೂರ್ವದಲ್ಲಿ ಉದ್ಯಾನವನ , ಸಿಎ ಸೈಟ್ ಮತ್ತು ರಸ್ತೆ ಜಮೀನುಗಳ ಪರಿತ್ಯಾಜನ ಪತ್ರ ನೀಡಲು ಅನುಕೂಲವಾಗುವಂತೆ ಇರುವ ಜಮೀನಿಗೆ ಇ-ಖಾತೆ ಮಂಜೂರು ಮಾಡುವ ಕುರಿತು ಹಾಗೂ ಒಂದು ಸ್ಥಿರಾಸ್ಮಿಯನ್ನು ವಿಭಜಿಸಿ, ಮಾರಾಟ ಮಾಡುವುದಕ್ಕಾಗಿ, ನೋಂದಣಿಗಾಗಿ ಇ-ಖಾತೆಯನ್ನು ವಿಭಜಿಸಬೇಕಾಗಿರುತ್ತದೆ. ವಿಭಜಿತ ಖಾತೆ ಇಲ್ಲದಿದ್ದಲ್ಲಿ ದಸ್ತಾವೇಜು ನೋಂದಣಿಗೆ ಸಾಧ್ಯವಾಗುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಭೂಪರಿವರ್ತನೆಯ ನಂತರ ಸಂಬಂಧಿಸಿದ ಯೋಜನಾ ಪ್ರಾಧಿಕಾರದಿಂದ ಲೇಔಟ್ ಪ್ಲಾನ್‌ಗೆ ಅನುಮತಿ ಪಡೆಯದೆ ಜಮೀನನ್ನು ಮಾರಾಟ ಮಾಡಬೇಕಾಗಿದ್ದಲ್ಲಿ ಅಂತಹ ಆಸ್ತಿಗಳಿಗೆ ಉಂಡೆ ಖಾತೆ ಮಾಡುವುದು ಹಾಗೂ ಇಂತಹ ಜಮೀನುಗಳನ್ನು ಮಾರಾಟ ಮಾಡುವಾಗ ಮಾರ್ಗಸೂಚಿ ದರ ನಿಗಧಿಪಡಿಸಬೇಕು ಎಂದು ಸೂಚಿಸಿದರು.
Advertisement