ಇ-ಖಾತಾ ಮಾಡಿಸಲು ಡೆಡ್‌ ಲೈನ್ ನೀಡಿಲ್ಲ, ಆತಂಕ ಬೇಡ: ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ

ಇ-ಖಾತಾ ಪಡೆಯಲು ಆತುರ ಬೇಕಿಲ್ಲ. ನಿವೇಶನಗಳನ್ನು ಮಾರುವ ಅಥವಾ ಕೊಳ್ಳುವ ಪ್ರಕ್ರಿಯೆಯಲ್ಲಿ ಮಾತ್ರ ಇ-ಖಾತಾ ಕಡ್ಡಾಯ ಮಾಡಲಾಗಿದೆ.
ಸಚಿವ ಕೃಷ್ಣ ಬೈರೇಗೌಡ
ಸಚಿವ ಕೃಷ್ಣ ಬೈರೇಗೌಡ
Updated on

ಬೆಂಗಳೂರು: ರಾಜ್ಯದಲ್ಲಿ ನಿವೇಶನ ಮಾರಾಟದಲ್ಲಿ ಆಗುತ್ತಿರುವ ವಂಚನೆ ತಡೆಗಟ್ಟುವ ಹಿನ್ನೆಲೆಯಲ್ಲಿ ಇ.ಖಾತೆಯನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಯಾವುದೇ ಡೆಡ್ ಲೈನ್ ವಿಧಿಸಿಲ್ಲ. ಹೀಗಾಗಿ ಸಾರ್ವಜನಿಕರು ಆತುರ ಪಡುವ ಅಗತ್ಯ ಇಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೋಮವಾರ ಹೇಳಿದರು.

ಇ-ಖಾತಾ ಬಗೆಗಿನ ಗೊಂದಲಗಳ ಬಗ್ಗೆ ಸೋಮವಾರ ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದ ಬಳಿಕ ವಿಕಾಸಸೌಧದಲ್ಲಿ ತುರ್ತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಸಚಿವರು ಮಾತನಾಡಿದರು.

ಬಿಬಿಎಂಪಿ ವ್ಯಾಪ್ತಿಯ ಕೆಲವು ಭಾಗದಲ್ಲಿ ಮಧ್ಯವರ್ತಿಗಳು ಇ-ಖಾತಾ ಗೆ ಸರ್ಕಾರ ಸಮಯ ನಿಗದಿ ಮಾಡಿದೆ ಎಂದು ಜನರಲ್ಲಿ ಗೊಂದಲ ಸೃಷ್ಟಿಸಿ, ಇ-ಖಾತೆ ಮಾಡಿಸಿಕೊಡುವುದಾಗಿ ಜನರನ್ನು ಸುಲಿಗೆ ಮಾಡಿರುವ ಘಟನೆ ಗಮನಕ್ಕೆ ಬಂದಿದೆ. ಆದರೆ, ಆಸ್ತಿ ಮಾಲೀಕರು ಇ-ಖಾತಾ ಮಾಡಿಸಿಕೊಳ್ಳಲು ಸರ್ಕಾರ ಯಾವುದೇ ಸಮಯ ನಿಗದಿ ಮಾಡಿಲ್ಲ. ಹೀಗಾಗಿ, ಸಾರ್ವಜನಿರಕರು ಗಾಬರಿಗೊಳಗಾಗದೆ, ಆತುರಪಡದೆ ತಮ್ಮ ಸಮಯ ನೋಡಿಕೊಂಡು ಇ-ಖಾತಾ ಮಾಡಿಸಿಕೊಳ್ಳಬಹುದು. ಊಹಾಪೋಹಗಳಿಗೆ ಕಿವಿಕೊಟ್ಟು ಆತಂಕಕ್ಕೆ ಒಳಗಾಗಬೇಡಿ ಎಂದು ಗೊಂದಲಕ್ಕೆ ತೆರೆ ಎಳೆದರು.

ನಕಲಿ ನೋಂದಣಿ ಪ್ರಕರಣಗಳನ್ನು ತಡೆಯೊಡ್ಡುವ ಸಲುವಾಗಿಯೇ ಇ-ಖಾತಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೆ, ಇ-ಖಾತಾ ಪಡೆಯಲು ಆತುರ ಬೇಕಿಲ್ಲ. ನಿವೇಶನಗಳನ್ನು ಮಾರುವ ಅಥವಾ ಕೊಳ್ಳುವ ಪ್ರಕ್ರಿಯೆಯಲ್ಲಿ ಮಾತ್ರ ಇ-ಖಾತಾ ಕಡ್ಡಾಯ ಮಾಡಲಾಗಿದೆ. ಅಲ್ಲದೆ, ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಸೂಚನೆ ಮೇರೆಗೆ ಪಾಲಿಕೆಯ ವಿಶೇಷ ಆಯುಕ್ತರ ಜೊತೆ ಚರ್ಚಿಸಿ ಇ-ಖಾತಾ ಪ್ರಕ್ರಿಯೆಯನ್ನೂ ಸರಳೀಕರಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲು ಸೂಕ್ತ ಕ್ರಮ ಜರುಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು: ಇ-ಖಾತಾ ವಿತರಣಾ ವ್ಯವಸ್ಥೆ ಪರೀಕ್ಷಾರ್ಥ ಆರಂಭ

ಇ-ಖಾತಾ ಪಡೆಯಲು ಸಾರ್ವಜನಿಕರು ಕಚೇರಿಗಳಿಗೆ ಬರುವ ಅಗತ್ಯ ಇಲ್ಲ. ಬದಲಾಗಿ ಮನೆಯಿಂದಲೇ ಇ-ಖಾತಾ ಡೌನ್ಲೋಡ್ ಮಾಡಿಕೊಳ್ಳಬಹುದು. ಬೆಂಗಳೂರಿನಲ್ಲಿ 21 ಲಕ್ಷ ನಿವೇಶನಗಳಿವೆ. ಈ ನಿವೇಶನಗಳ ಡ್ರಾಪ್ಟ್ಗಳನ್ನು ಬಿಬಿಎಂಪಿ ಈಗಾಗಲೇ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. ಆಸ್ತಿ ಮಾಲೀಕರು ಈ ಡ್ರಾಪ್ಟ್ ಗಳನ್ನು ನೋಡಿ, ಅಗತ್ಯ ದಾಖಲೆಗಳನ್ನು ವೆಬ್ಸೈಟ್ ನಲ್ಲೇ ಲಗತ್ತಿಸುವ ಮೂಲಕ ಯಾವುದೇ ಕಚೇರಿಗೆ ಹೋಗದೆ ಮನೆಯಿಂದಲೇ ಶಾಶ್ವತ ಇ-ಖಾತಾ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಇ-ಖಾತಾ ಪಡೆಯುವ ಸಂಬಂಧ ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆ ಗಮನದಲ್ಲಿದ್ದು, ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಲ್ಪ್ ಡೆಸ್ಕ್ ಗಳನ್ನು ತೆರೆಯುವ ಮೂಲಕ ಸರ್ಕಾರವೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಆಸ್ತಿ ಮಾಲೀಕರು ಯಾವುದೇ ಗೊಂದಲವಿಲ್ಲದೆ, ಸುಲಭವಾಗಿ ಇ-ಖಾತಾ ಪಡೆಯುವ ಸಲುವಾಗಿ ತತಕ್ಷಣ ಜಾರಿಯಾಗುವಂತೆ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಸಹಾಯಕ ಕಂದಾಯ ಅಧಿಕಾರಿ ಕಚೇರಿಗಳಲ್ಲಿ ಹೆಲ್ಪ್ ಡೆಸ್ಕ್ ತೆರೆಯಲಾಗಿದೆ ಎಂದರು.

ಅಲ್ಲದೆ, ಇ-ಖಾತಾ ಪಡೆಯಲು ಆಸ್ತಿ ಮಾಲೀಕರು ಕೆಲವು ದಾಖಲೆಗಳನ್ನು ನೀಡುವುದು ಅಗತ್ಯವಾಗಿದ್ದು, ಅವುಗಳನ್ನು ʼಬೆಂಗಳೂರು ಒನ್ʼ ಕಚೇರಿಗಳ ಮುಖಾಂತರ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ತಮ್ಮ ಇ-ಖಾತೆಯನ್ನು ಪಡೆದುಕೊಳ್ಳಬಹುದು. ಮುಂದಿನ ಎರಡು-ಮೂರು ದಿನಗಳಲ್ಲಿ ಬೆಂಗಳೂರು-ಒನ್ ಕಚೇರಿಗಳಲ್ಲಿ ಈ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಹೇಳಿದರು.

ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಹಾಗೂ ನಕಲಿ ನೋಂದಣಿಗಳನ್ನು ತಪ್ಪಿಸಿ, ಆಸ್ತಿ ಮಾಲೀಕರ ಮಾಲೀಕತ್ವವನ್ನು ರಕ್ಷಿಸಲು ಇ-ಖಾತಾ ವ್ಯವಸ್ಥೆ ಶಾಶ್ವತ ಪರಿಹಾರ ನೀಡಲಿದೆ. ಇ-ಖಾತಾಗೆ ಸಂಬಂಧಿಸಿದಂತೆ ಕೆಲವು ಗೊಂದಲಗಳಿರುವುದು ನಿಜ. ಆದರೆ, ಆಸ್ತಿ ಮಾಲೀಕರು ಒಂದು ಬಾರಿ ಇ-ಖಾತಾ ಮಾಡಿಸಿಕೊಂಡರೆ ಯಾವ ಮಧ್ಯವರ್ತಿಗಳ ಮುಲಾಜಿಲ್ಲದೆ ಬದುಕಬಹುದು.

ಸಾರ್ವಜನಿಕರ ಅನುಕೂಲಕ್ಕಾಗಿಯೇ ಹಲವು ಸವಾಲುಗಳ ನಡುವೆಯೂ ಈ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಇದು ನಕಲಿ ನೋಂದಣಿಗಳನ್ನು ತಡೆಯುವುದಕ್ಕೂ ಇದು ಸಹಕಾರಿಯಾಗಲಿದೆ. ಇ-ಖಾತಾ ವ್ಯವಸ್ಥೆಯನ್ನು ಒಂದು ಬಾರಿ ಅನುಷ್ಠಾನ ಮಾಡಿದರೆ, ಇಡೀ ದೇಶದಲ್ಲಿ ಅತ್ಯುತ್ತಮ ಮಾದರಿ ಖಾತಾ ವ್ಯವಸ್ಥೆಯನ್ನು ನೀಡಿದಂತಾಗುತ್ತದೆ. ಸಣ್ಣ ಪುಟ್ಟ ಗೊಂದಲಗಳಿಗೆ ವಾರದಲ್ಲಿ ತೆರೆ ಬೀಳಲಿದೆ ಎಂದು ಭರವಸೆ ನೀಡಿದರು

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com