ಬೆಂಗಳೂರು: ನೇರ ನಗದು ವರ್ಗಾವಣೆ ಮೂಲಕ ರಾಜ್ಯದ ರೈತರಿಗೆ 2100 ಕೋಟಿ ರೂ ಬೆಳೆ ವಿಮೆ ಪಾವತಿ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಗುರುವಾರ ಹೇಳಿದೆ.
ಜಿಕೆವಿಕೆ ಆವರಣದಲ್ಲಿ ಬೆಂಗಳೂರು ಕೃಷಿ ವಿವಿ ವತಿಯಿಂದ ಏರ್ಪಡಿಸಲಾಗಿದ್ದ ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನ ಜೊತೆಗೆ ಸಮಗ್ರ ಬೇಸಾಯ ಅಳವಡಿಕೆಯಿಂದ ಸುಸ್ಥಿರ ಹಾಗೂ ಲಾಭದಾಯಕ ಕೃಷಿಗೆ ದಾರಿಯಾಗಿದೆ. ರೈತರು ಈ ನಿಟ್ಟಿನಲ್ಲಿ ಗಮನ ಹರಿಸುವ ಅಗತ್ಯವಿದೆ ಎಂದು ಹೇಳಿದರು,
ಈ ಬಾರಿ ‘ಹವಾಮಾನ ಚತುರ ಡಿಜಿಟಲ್ ಕೃಷಿ’ ಎಂಬ ಘೋಷವಾಕ್ಯದೊಂದಿಗೆ ಈ ಮೇಳವನ್ನು ಆಯೋಜಿಸುತ್ತಿರುವುದು ಕೃಷಿ ಕ್ಷೇತ್ರದ ಸಕಾಲಿಕ ಚಿಂತನೆಯಾಗಿ ಎದ್ದು ಕಾಣುತ್ತಿದೆ. ರೈತ ಕುಟುಂಬಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ. ರೈತರು ತಮ್ಮ ಶ್ರಮ ಮತ್ತು ಚಿಂತನೆಯಿಂದ ಆರ್ಥಿಕವಾಗಿ ಸಬಲರಾಗಲು ಒಂದು ಒಳ್ಳೆಯ ಅವಕಾಶವನ್ನು ಕಲ್ಪಿಸಿದೆ. ರೈತರು ಕೃಷಿ ವಿಶ್ವವಿದ್ಯಾನಿಲಯಗಳಿಂದ ಆವಿಷ್ಕರಿಸಿದ ಸಂಶೋಧನೆ, ತಂತ್ರಜ್ಞಾನಗಳನ್ನು ಮತ್ತು ಮಿಶ್ರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡರೆ ಕಡಿಮೆ ಹೂಡಿಕೆಯೊಂದಿಗೆ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂದು ತಿಳಿಸಿದರು.
ರಾಜ್ಯದಲ್ಲಿ ಸುಮಾರು 78 ಲಕ್ಷಕ್ಕೂ ಹೆಚ್ಚು ರೈತರು ಹಾಗೂ 125 ಲಕ್ಷಕ್ಕೂ ಹೆಚ್ಚು ಕೃಷಿ ಕಾರ್ಮಿಕರು ಕೃಷಿಯಲ್ಲಿ ತೊಡಗಿದ್ದಾರೆ. ರಾಜ್ಯ ಸರಕಾರ ಕೃಷಿಗೆ ಗರಿಷ್ಠ ಆದ್ಯತೆ ನೀಡಿದೆ. ಹಿಂದಿನ ಸಾಲಿನಲ್ಲಿ ಸುಮಾರು 1,000 ಕೋಟಿ ರೂ. ಸಬ್ಸಿಡಿಯೊಂದಿಗೆ ಯಂತ್ರೋಪಕರಣ, ನೀರಾವರಿ ಸಲಕರಣೆಗಳನ್ನು ವಿತರಿಸಿದೆ. 2,100 ಕೋಟಿ ರೂಪಾಯಿ ಬೆಳೆ ವಿಮೆ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ರೈತರಿಗೆ ಭರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇದಲ್ಲದೆ, ರೈತರಿಗೆ ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆ ರೂಪಿಸಿ, ಆರ್ಥಿಕ ನೆರವಿನೊಂದಿಗೆ ಬೃಹತ್ ಬೆಳೆ ಕಟಾವು ಯಂತ್ರಗಳನ್ನು ವಿತರಿಸಲಾಗಿದೆ. 5 ಗ್ಯಾರಂಟಿ ಯೋಜನೆಗಳ ಮೂಲಕವು ಕೃಷಿ ಸಮುದಾಯ ಹಾಗೂ ಜನ ಸಾಮಾನ್ಯರಿಗೆ ನಮ್ಮ ಸರಕಾರ ನೆರವು ಒದಗಿಸಿದೆ ಎಂದು ಹೇಳಿದರು.
ದೇಶದಲ್ಲಿ ಶೇ.75 ಜನರು ಕೃಷಿಯನ್ನು ಅವಲಂಭಿಸಿದ್ದು, 60ರ ದಶಕದಲ್ಲಿ ದೇಶದಲ್ಲಿ ನಡೆದ ಹಸಿರು ಕ್ರಾಂತಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಭನೆ ಸಾಧಿಸಲು ಸಾಧ್ಯವಾಯಿತು. 1964-65ರಲ್ಲಿ ಆಹಾರ ಉತ್ಪಾದನೆ ರಾಷ್ಟ್ರಮಟ್ಟದಲ್ಲಿ 45.4 ಮಿಲಿಯನ್ ಟನ್‍ಗಳಷ್ಟಿದ್ದು, 2023-24ರ ಸಾಲಿಗೆ 332.22 ಮಿಲಿಯನ್ ಟನ್‍ಗಳಿಗೆ ಏರಿಕೆಯಾಗಿದೆ. 2047ರ ವೇಳೆಗೆ 437 ಮಿಲಿಯನ್ ಟನ್‍ಗೆ ಯೋಜನೆಯನ್ನು ರೂಪಿಸಿದೆ. ಆಹಾರ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಕೃಷಿ ವಿಶ್ವವಿದ್ಯಾಲಯಗಳ ಸಂಶೋಧನೆಯ ಪಾತ್ರ ಮಹತ್ವದ್ದಾಗಿದೆ. ವಿಶ್ವವಿದ್ಯಾನಿಲಯಗಳು ನಿರಂತರವಾಗಿ ಸಂಶೋಧನೆ ಮತ್ತು ಹೊಸ ತಳಿಗಳನ್ನು ಬಿಡುಗಡೆ ಮಾಡುತ್ತಿವೆ, ಇದು ಕಡಿಮೆ ನೀರು ಮತ್ತು ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿಯನ್ನು ನೀಡುತ್ತದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
Advertisement