ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ: ವೇಶ್ಯಾವಾಟಿಕೆ ಆರೋಪ, ತಾಯಿ-ಮಗಳ ಬಟ್ಟೆ ಹರಿದು ಹಲ್ಲೆ

ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆ ಹಾಗೂ ಆಕೆಯ ಮಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯ ಗಂಗವಾಡಿಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಳಗಾವಿ: ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿಹಾಕಿ ಅಮಾನುಷವಾಗಿ ಹಲ್ಲೆ ಮಾಡಿದ ಘಟನೆ ಮಾಸುವ ಮುನ್ನವೇ ಈಗ ಅಂತಹದ್ದೇ ಮತ್ತೊಂದು ಅಮಾನವೀಯ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.

ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆ ಹಾಗೂ ಆಕೆಯ ಮಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯ ಗಂಗವಾಡಿಯಲ್ಲಿ ನಡೆದಿದೆ. ಈ ಸಂಬಂಧ ಮೂವರನ್ನು ಬಂಧನಕ್ಕೊಳಪಡಿಸಲಾಗಿದೆ.

ರಾಮನಗರ ವಡ್ಡರವಾಡಿಯ 60 ವರ್ಷದ ವೃದ್ಧೆ ಹಾಗೂ ಆಕೆಯ 29 ವರ್ಷದ ಪುತ್ರಿ ಮೇಲೆ ಪಕ್ಕದ ಮನೆಯವರು ಹಲ್ಲೆ ಮಾಡಿರುವ‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಎಸಿಪಿ ಶ್ರೇಣಿಯ ಅಧಿಕಾರಿ ಪ್ರಕರಣದ ತನಿಖೆ ನಡೆಸಲಿದ್ದಾರೆ ಎಂದು ಬೆಳಗಾವಿ ಪೊಲೀಸ್ ಕಮಿಷನರ್ ಲಾಡಾ ಮಾರ್ಟಿನ್ ಮಾರ್ಬನಿಯಾಂಗ್ ಹೇಳಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮಹಿಳೆಯ ಮನೆಗೆ ಉಪ ಪೊಲೀಸ್ ಆಯುಕ್ತ ರೋಹನ್ ಜಗದೀಶ್ ಅವರು ಭೇಟಿ ನೀಡಿದ್ದು, ಮಾಹಿತಿ ಪಡೆದುಕೊಂಡಿದ್ದಾರೆ.

ಸಂಗ್ರಹ ಚಿತ್ರ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಘಟನೆ ಅಮಾನವೀಯ, ತಪ್ಪಿತಸ್ಥರಿಗೆ ಶಿಕ್ಷೆ, ಬಿಜೆಪಿ ರಾಜಕೀಯ ಮಾಡುತ್ತಿದೆ: ಸಿಎಂ ಸಿದ್ದರಾಮಯ್ಯ

ಘಟನೆ ಸಂಬಂಧ ವಿಶೇಷ ತಂಡ ರಚಿಸಲಾಗುತ್ತಿದ್ದು, ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದು ಜನತೆಗೆ ಎಚ್ಚರಿಕೆ ನೀಡಿದರು. ಅಲ್ಲದೆ, ಮಹಿಳೆಯರಿಗೆ ಭದ್ರತೆ ಒದಗಿಸಲಾಗುವುದು ಎಂದು ತಿಳಿಸಿದರು.

ಈ ನಡುವೆ ಮಹಿಳೆ ಹಾಗೂ ಆಕೆಯ ಪುತ್ರಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದು, ಹಲವು ಪುರುಷರು ಅವರ ಮನೆಗೆ ಭೇಟಿ ನೀಡುತ್ತಿದ್ದಾರೆಂದು ಕೆಲ ನಿವಾಸಿಗಳು ಆರೋಪಿಸಿದ್ದಾರೆ.

ಈ ಹಿಂದೆ ಕೂಡ ನಮ್ಮ ಮೇಲೆ ಹಲ್ಲೆ ನಡೆಸಿದ್ದರು. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹಲವು ಬಾರಿ ಮನವಿ ಮಾಡಿದರು, ನೆರವಿಗೆ ಧಾವಿಸಿರಲಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.

ನನ್ನ ಪತಿ ಮಹಾರಾಷ್ಟ್ರದಲ್ಲಿ ನೆಲೆಸಿದ್ದು, ಪತಿಯ ಕಿರುಕುಳ ತಾಳಲಾರದೆ ತಾಯಿ ಮನೆಗೆ ಬಂದಿದ್ದೆ. ಅಂಗಡಿಯಿಂದ ಬರುವ ಹಣದಿಂದ ಮನೆ ಬಾಡಿಗೆ ಕಟ್ಟಿ ಜೀವನ ನಡೆಸುತ್ತಿದ್ದೇವೆ. ಆದರೆ, ಇಲ್ಲಿನ ಜನರು ವೇಶ್ಯಾವಾಟಿಕೆ ನಡೆಸುತ್ತೇದ್ದೇವೆಂದು ಆರೋಪಿಸಿದ್ದಾರೆ. ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಸತ್ಯಾಸತ್ಯತೆಗಳನ್ನು ತಿಳಿಯಬೇಕು ಎಂದು ಮಹಿಳೆಯ ಪುತ್ರಿ ಹೇಳಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿಯೂ ಬೆಳಗಾವಿ ಬಳಿಯ ವಂಟಮೂರಿಯಲ್ಲಿ ಮಹಿಳೆಯೊಬ್ಬರನ್ನು ಗುಂಪೊಂದು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com