ಬೆಂಗಳೂರು: ರಾಜಾಜಿನಗರದ ಎಲೆಕ್ಟ್ರಿಕ್ ವಾಹನ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡು 20 ವರ್ಷದ ಮಹಿಳೆಯೊಬ್ಬರು ಸಜೀವ ದಹನವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಮಾಲೀಕನನ್ನು ಬಂಧಿಸಲಾಗಿದೆ.
ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಇವಿ ಶೋರೂಂ ಮಾಲೀಕ 36 ವರ್ಷದ ಪುನಿತ್ ಗೌಡ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106 (ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಪುನಿತ್ ಗೌಡ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ಕೋರ್ಟ್ ಆರೋಪಿಗೆ ಷರತ್ತುಬದ್ಧ ಜಾಮೀನು ನೀಡಿದೆ ಎಂದು ಪೊಲೀಸರು ಹೇಳಿದ್ದಾರೆ.
ಪುನಿತ್ ಗೌಡ ಅವರ ಶೋರೂಂನಲ್ಲಿ ಮಂಗಳವಾರ ಸಂಜೆ ಅಗ್ನಿ ಅವಘಡ ಸಂಭವಿಸಿತ್ತು.
ಪೊಲೀಸರ ಪ್ರಕಾರ ಬೆಂಕಿ ಹೊತ್ತಿಕೊಂಡಾಗ ಶೋರೂಂನಲ್ಲಿ ಐದರಿಂದ ಆರು ಮಂದಿ ಇದ್ದರು. ಮೃತ ಕ್ಯಾಷಿಯರ್ ಪ್ರಿಯಾ ಹೊರತುಪಡಿಸಿ ಇತರ ಎಲ್ಲರೂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಉಸಿರುಗಟ್ಟುವಿಕೆ ಮತ್ತು ತೀವ್ರ ಸುಟ್ಟ ಗಾಯಗಳಿಂದ ಪ್ರಿಯಾ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಗ್ನಿ ಅವಘಡದಲ್ಲಿ 45ಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‌ಗಳು ಬೆಂಕಿಗೆ ಆಹುತಿಯಾಗಿವೆ.
Advertisement