ಬೆಂಗಳೂರು: ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಎಲ್ಲಾ ಇಲಾಖೆಗಳ ನಡುವೆ ಸಮನ್ವಯ ಅತ್ಯಗತ್ಯವಿದೆ ಎಂದು ಸಚಿವ ಈಶ್ವರ್ ಖಂಡ್ರೆ ಅವರು ಗುರುವಾರ ಹೇಳಿದರು.
ಪರಿಸರ ಶಿಕ್ಷಣ ಕೇಂದ್ರ (ಸಿಇಇ) ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಮತ್ತು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಜರ್ಮನ್ ಫೌಂಡೇಶನ್ ಹ್ಯಾನ್ಸ್ ಸೀಡೆಲ್ ಸ್ಟಿಫ್ಟಂಗ್ ಸಹಯೋಗದಲ್ಲಿ ಆಯೋಜಿಸಲಾಗಿರುವ 2 ದಿನಗಳ ರಾಜ್ಯ ಹವಾಮಾನ ಕ್ರಮ ಮತ್ತು ಮೇಲ್ವಿಚಾರಣೆ ಕುರಿತ ನೀತಿ ಸಂವಾದಕ್ಕೆ ಸಚಿವ ಈಶ್ವರ್ ಖಂಡ್ರೆಯವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವರು, ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ ಇಂದು ವಿಶ್ವಕ್ಕೇ ಸವಾಲಾಗಿದ್ದು, ಇದರ ಪರಿಣಾಮ ಎದುರಿಸಲು ಮತ್ತು ಪರಿಸರದ ಉಳಿವಿಗಾಗಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವುದು ಅತ್ಯಗತ್ಯವಿದೆ ಎಂದು ಹೇಳಿದರು.
ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯನ್ನು ತಗ್ಗಿಸಲು ಮಾರ್ಗಗಳನ್ನು ಕಂಡುಕೊಳ್ಳಲು ಸಂಶೋಧನೆಯನ್ನು ಕೈಗೊಳ್ಳುವ ಏಜೆನ್ಸಿಗಳೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದು ಈ ಸಮಸ್ಯೆಗಳನ್ನು ದೂರಾಗಿಸಲು ಕಂಡುಕೊಂಡ ಪರಿಹಾರವನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ತರಲು ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಜೂನ್ 2008 ರಲ್ಲಿ ಹವಾಮಾನ ಬದಲಾವಣೆಯ ರಾಷ್ಟ್ರೀಯ ಕ್ರಿಯಾ ಯೋಜನೆ ಯನ್ನು ಬಿಡುಗಡೆ ಮಾಡಿತ್ತು. ಹವಾಮಾನ "ಸಹ-ಪ್ರಯೋಜನಗಳೊಂದಿಗೆ" ಸುಸ್ಥಿರ ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ಸೂಕ್ತವಾದ ದೀರ್ಘಕಾಲೀನ ಕ್ರಮಗಳಿಗಾಗಿ ನೀತಿಗಳನ್ನು ರೂಪಿಸುವುದು ಅಗತ್ಯವಾಗಿದೆ.
ಹವಾಮಾನ ಸಂಬಂಧಿತ ವಿಕೋಪಗಳಿಂದ ಕೃಷಿ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ ಮತ್ತು ಮೀನುಗಾರಿಕೆ, ಆರೋಗ್ಯ ಮುಂತಾದ ಕ್ಷೇತ್ರಗಳು ಬಾಧಿತವಾಗಿವೆ. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು, ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ನಿಗದಿಪಡಿಸಿದ ಮಾರ್ಗಸೂಚಿಗಳನ್ವಯ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಹವಾಮಾನ ಬದಲಾವಣೆಯ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ -2 (ಕೆಎಸ್ಎಪಿಸಿಸಿ ವಿ.2) ಅನ್ನು ಸಿದ್ಧಪಡಿಸಿದೆ. ಇದಕ್ಕೆ ಭಾರತ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಹವಾಮಾನ ಬದಲಾವಣೆಯ ರಾಷ್ಟ್ರೀಯ ಪರಾಮರ್ಶನಾ ಸಮಿತಿ ಅನುಮೋದನೆ ನೀಡಿದೆ.
ಹವಾಮಾನ ಬದಲಾವಣೆಯ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ -2 ಅನುಷ್ಠಾನದ ಪರಿಣಾಮಕಾರಿ ಮೇಲ್ವಿಚಾರಣೆಗೆ ಅಗತ್ಯ ಪರಿಣತಿಯೊಂದಿಗೆ ಅಧಿಕಾರಿಗಳನ್ನು ಸಜ್ಜುಗೊಳಿಸಲು ಆಯ್ದ ಜಿಲ್ಲಾ ಮಟ್ಟದ ಸರ್ಕಾರಿ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ಮಹಾ ನಿರ್ದೇಶಕ ಬಿ.ಪಿ.ರವಿ ಅವರು ಮಾತನಾಡಿ, ಕೇಂದ್ರ ಸರ್ಕಾರದ ಹವಾಮಾನ ಬದಲಾವಣೆ ಕ್ರಿಯಾ ಯೋಜನೆಯ ಆಧಾರದ ಮೇಲೆ ಪ್ರತಿ ಇಲಾಖೆಗೆ ಮಾಡಬೇಕಾದ ಕಾರ್ಯಗಳ ಪಟ್ಟಿಯನ್ನು ನೀಡಲಾಗಿದೆ ಎಂದು ಹೇಳಿದರು.
ನೀತಿಯ ಅಡಿಯಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಡ್ಯಾಶ್‌ಬೋರ್ಡ್ ಅನ್ನು ಸಹ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.
ಈ ನೀತಿಯು ತೋಟಗಾರಿಕೆ, ಕೃಷಿ, ಪಶುಸಂಗೋಪನೆ, ಕಂದಾಯ ಮತ್ತು ಅರಣ್ಯ ಇಲಾಖೆಗಳ ನಡುವಿನ ಸಮನ್ವಯಕ್ಕೆ ಒತ್ತು ನೀಡುತ್ತಿದೆ. ಪಶ್ಚಿಮ ಘಟ್ಟಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅರಣ್ಯೀಕರಣದ ಪ್ರಯತ್ನಗಳು ಸುಲಭವಾಗಿದ್ದರೆ, ಬಳ್ಳಾರಿ, ಕಲಬುರಗಿ, ರಾಯಚೂರು ಮತ್ತು ಕಲ್ಯಾಣ ಕರ್ನಾಟಕದಂತಹ ಇತರ ಪ್ರದೇಶಗಳಲ್ಲಿ ಹೆಚ್ಚಿನ ಗಮನ ಅಗತ್ಯವಿದೆ ಎಂದು ವಿವರಿಸಿದರು
Advertisement