ಬೆಂಗಳೂರು: ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಪರಿವರ್ತಿಸಲು ಉಕ್ಕು ಉದ್ಯಮ ಬಹುದೊಡ್ಡ ಕೊಡುಗೆ ನೀಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಗುರುವಾರ ಹೇಳಿದರು.
ಭಾರತೀಯ ಲೋಹ ಸಂಸ್ಥೆ (ಐಐಎಂ) ಹಮ್ಮಿಕೊಂಡಿದ್ದ ‘ಲೋಹಶಾಸ್ತ್ರಜ್ಞ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಷ್ಟ್ರ ನಿರ್ಮಾಣದಲ್ಲಿ ಉಕ್ಕಿನ ಉದ್ಯಮದ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಪರಿವರ್ತಿಸಲು ಶ್ರಮಿಸಲಾಗುತ್ತಿದೆ. ಈ ರೂಪಾಂತರಕ್ಕೆ ಉಕ್ಕು ಪ್ರಮುಖ ಕೇಂದ್ರವಾಗಿ ಉಳಿದಿದ್ದು, ಜಾಗತಿಕ ವೇದಿಕೆಯಲ್ಲಿ ದೇಶದ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸುತ್ತಿದೆ ಎಂದು ಹೇಳಿದರು.
ಇದೇ ವೇಳೆ ತಮ್ಮ ಕ್ಷೇತ್ರದ ಸಾಧನೆಗಳನ್ನು ಸಚಿವರು ಶ್ಲಾಘಿಸಿದರು. ವಿಶೇಷ ಉಕ್ಕು, ಹಸಿರು ಉಕ್ಕು ತಯಾರಿಕೆಗೆ ಆದ್ಯತೆ ನೀಡಲಾಗಿದೆ. ಉಕ್ಕಿನ ಸುಸ್ಥಿರ ಉತ್ಪಾದನೆಗೆ ಜಲಜನಕ ಆಧಾರಿತ ಉಕ್ಕು ತಯಾರಿಕೆ ಮತ್ತು ಮರು ಬಳಕೆಯನ್ನು ಉತ್ತೇಜಿಸಲಾಗುತ್ತಿದೆ. ಉತ್ಪಾದನಾ ಸಂಪರ್ಕ ಉಪಕ್ರಮ ಸೇರಿದಂತೆ ಹಲವಾರು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಜಾರಿಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಭಾರತ ಜಗತ್ತಿನ ಐದನೇ ಬೃಹತ್ ಆರ್ಥಿಕ ಶಕ್ತಿಯಾಗುತ್ತಿದೆ. ಈ ಪ್ರಯತ್ನಕ್ಕೆ ಉಕ್ಕು ಉದ್ಯಮ ಬಹುದೊಡ್ಡ ಕೊಡುಗೆ ನೀಡುತ್ತಿದೆ. ಉಕ್ಕು ಕ್ಷೇತ್ರದಲ್ಲಿ ಸುಸ್ಥಿರ ಮತ್ತು ಚಲನಶೀಲ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಅದಕ್ಕೆ ಪೂರಕವಾಗಿ ನಿರ್ದಿಷ್ಟ ಕಾರ್ಯಸೂಚಿಗಳನ್ನು ರೂಪಿಸಲಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಪ್ರಾಮುಖ್ಯ ನೀಡುವುದರ ಜತೆಗೆ, ಉಕ್ಕು ಉತ್ಪಾದನೆ ಪ್ರಕ್ರಿಯೆಯಲ್ಲಿ ಉಂಟಾಗುತ್ತಿರುವ ವಾಯುಮಾಲಿನ್ಯವನ್ನು ಶೂನ್ಯ ಮಟ್ಟಕ್ಕೆ ತರುವ ಗುರಿ ಹೊಂದಲಾಗಿದೆ. 2070ರ ವೇಳೆಗೆ ಈ ಗುರಿಯನ್ನು ಖಚಿತವಾಗಿ ಸಾಧಿಸಲಾಗುವುದು ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಜಾಗತಿಕ ಪರಿಸರ ಸಮತೋಲನದ ಉದ್ದೇಶದ ಹಿನ್ನೆಲೆಯಲ್ಲಿ ಉಕ್ಕಿನ ಸುಸ್ಥಿರ ಉತ್ಪಾದನೆಗೆ ಹೈಡ್ರೋಜನ್ ಆಧಾರಿತ ಉಕ್ಕು ತಯಾರಿಕೆ ಮತ್ತು ಉಕ್ಕಿನ ಮರು ಬಳಕೆಯನ್ನು ಉತ್ತೇಜಿಸಲಾಗುತ್ತಿದೆ ಎಂದು ಹೇಳಿದರು.
Advertisement