ಬೆಂಗಳೂರು: ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ವೇಳೆ BDA-ಪೊಲೀಸರ ನಡುವೆ ಜಟಾಪಟಿ..!

ಕಟ್ಟಡ ತೆರವುಗೊಳಿಸಲು ಬಿಡಿಎ ಮುಂದಾಗುತ್ತಿದ್ದಂತೆಯೇ ಕುಟುಂಬಸ್ಥರು ಪೊಲೀಸರಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಮನವರಿಕೆ ಮಾಡಿಕೊಟ್ಟರು. ಬಳಿಕ ಪೊಲೀಸರು ಬಿಡಿಎ ಅಧಿಕಾರಿಗಳನ್ನು ತಡೆಹಿಡಿದರು.
ಬಿಡಿಎ ಕಾರ್ಯಾಚರಣೆ
ಬಿಡಿಎ ಕಾರ್ಯಾಚರಣೆ
Updated on

ಬೆಂಗಳೂರು: ಒಎಂಬಿಆರ್ ಲೇಔಟ್‌ನಲ್ಲಿರುವ ಮೂರು ಅಂತಸ್ತಿನ ಮನೆ ತೆರವು ಕಾರ್ಯಾಚರಣೆ ವೇಳೆ ಪೊಲೀಸರು ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಡುವೆ ವಾಕ್ಸಾಮರ ನಡೆದಿದ್ದು, ದೊಡ್ಡ ಹೈಡ್ರಾಮಾ ನಡೆದ ವಿದ್ಯಾಮಾನ ಶುಕ್ರವಾರ ಕಂಡು ಬಂದಿತು.

ಬಿಡಿಎ ಟಾಸ್ಕ್ ಫೋರ್ಸ್ ಮತ್ತು ಅದರ ಎಂಜಿನಿಯರ್‌ಗಳಿಗೆ ಬೆಂಬಲ ನೀಡಲು ಸ್ಥಳಕ್ಕೆ ಬಂದಿದ್ದ ಬಾಣಸವಾಡಿಯ ಪೊಲೀಸರು, ಇದ್ದಕ್ಕಿದ್ದಂತೆ ಬಿಡಿಎ ವಿರುದ್ಧ ತಿರುಗಿಬಿದ್ದರು. ಇದಕ್ಕೆ ಕಾರಣ ನ್ಯಾಯಾಲಯ ತಡೆಯಾಜ್ಞೆ.

ಬಿಡಿಎ ಕಟ್ಟಡ ತೆರವುಗೊಳಿಸಲು ಮುಂದಾಗುತ್ತಿದ್ದಂತೆಯೇ ಕುಟುಂಬಸ್ಥರು ಪೊಲೀಸರಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಮನವರಿಕೆ ಮಾಡಿಕೊಟ್ಟರು. ಬಳಿಕ ಪೊಲೀಸರು ಬಿಡಿಎ ಅಧಿಕಾರಿಗಳನ್ನು ತಡೆಹಿಡಿದರು.

ಮನೆಯನ್ನು ಪ್ರಭಾಕರ್ ರೆಡ್ಡಿ ಮತ್ತು ಕುಟುಂಬದವರು ಅಕ್ರಮವಾಗಿ ನಿರ್ಮಿಸಿದ್ದಾರೆ. ನಮ್ಮ ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಈಗಾಗಲೇ ನಿರ್ಮಾಣವನ್ನು ನಿಲ್ಲಿಸುವಂತೆ ಮೂರು ನೋಟಿಸ್‌ಗಳನ್ನು ನೀಡಿದ್ದಾರೆ. ನೋಟಿಸ್ ಬಳಿಕ ತಾತ್ಕಾಲಿಕವಾಗಿ ನಿರ್ಮಾಣ ಕಾರ್ಯ ನಿಲ್ಲಿಸುತ್ತಿದ್ದ ಅವರು, ಮತ್ತೆ ನಿರ್ಮಾಣವನ್ನು ಮುಂದುವರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಡಿಎ ಕಾರ್ಯಾಚರಣೆ
ಶಿವರಾಮ ಕಾರಂತ ಬಡಾವಣೆ ವಿಸ್ತರಣೆಯಲ್ಲಿ ಅಕ್ರಮ ನಿರ್ಮಾಣಕ್ಕೆ ಕಡಿವಾಣ ಹಾಕಲು ಬಿಡಿಎ ಮುಂದು!

ಕಟ್ಟಡ ತೆರವಿಗೂ ಮುನ್ನ ಆಸ್ತಿ ವಿವರಗಳನ್ನು ಪರಿಶೀಲನೆ ನಡೆಸಲಾಗಿತ್ತು. ಒಎಂಬಿಆರ್ ಲೇಔಟ್‌ನ ಮತ್ತೊಂದು ಮನೆ ತೆರವಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಆದರೆ, ಕುಟುಂಬವು ತಮ್ಮ ಕಟ್ಟಡಕ್ಕೆ ನೀಡಲಾಗಿದೆ ಎಂದು ಸುಳ್ಳು ಹೇಳಿ, ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು. 2ನೇ ಮಹಡಿಯ ಪಿಲ್ಲರ್ ಗಳನ್ನು ಕೆಡವಲಾಗಿತ್ತು. ಪೊಲೀಸರಿಗೂ 2 ದಿನಗಳ ಮುಂಚೆಯೇ ಮಾಹಿತಿ ನೀಡಲಾಗಿತ್ತು. ಆದರೆ, ಸ್ಥಳಕ್ಕೆ ಬಂದ ಪೊಲೀಸರು ನಮ್ಮನ್ನೇ ತಡೆಹಿಡಿದರು. ಕಟ್ಟಡ ಮಾಲೀಕರ ಇಬ್ಬರು ಪುತ್ರರು ಹಾಗೂ ಅವರ ಕೆಲ ಬೆಂಬಲಿಗರು ಸ್ಥಳಕ್ಕೆ ಬಂದು ವಿರೋಧ ವ್ಯಕ್ತಪಡಿಸಿದ್ದರು. ಬಾಣಸವಾಡಿಯ ಎಸಿಪಿ ಎಂ.ಎಚ್.ಉಮಾ ಶಂಕರ್ ಮಧ್ಯ ಪ್ರವೇಶಿಸಿ ನಮ್ಮ ಇಂಜಿನಿಯರ್‌ಗಳನ್ನು ನಿಂದಿಸಿ, ಬೆಳಗ್ಗೆ 10.30ಕ್ಕೆ ಕಾರ್ಯಾಚರಣೆ ನಿಲ್ಲಿಸುವಂತೆ ಸೂಚಿಸಿದರು ಎಂದು ಆರೋಪಿಸಿದ್ದಾರೆ.

ಬಿಡಿಎ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆಯೇ ಕುಟುಂಬಸ್ಥರು ನಮ್ಮನ್ನು ಸಂಪರ್ಕಿಸಿದ್ದರು. ನ್ಯಾಯಾಲಯದ ತಡೆಯಾಜ್ಞೆ ನೀಡಿರುವುದನ್ನು ತಿಳಿಸಿದರು. ಅಕ್ರಮವಾಗಿ ತೆರವು ಕಾರ್ಯಾಚರಣೆ ನಡೆಸಲು ಅನುಮತಿ ನೀಡಲು ಸಾಧ್ಯವಿಲ್ಲ. ಅಲ್ಲದೆ, ಬಿಡಿಎ ನಮಗೆ ಮೊದಲೇ ಮಾಹಿತಿಯನ್ನೂ ನೀಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಶೇ.20ರಷ್ಟು ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಠಾಣೆಯಿಂದ ಎಂಜಿನಿಯರ್‌ಗಳು ಮತ್ತು ಟಾಸ್ಕ್ ಫೋರ್ಸ್‌ಗೆ ಪದೇ ಪದೇ ಕರೆ ಮಾಡಿದರೂ ಉತ್ತರ ನೀಡಲಿಲ್ಲ. ಹೀಗಾಗಿ, ಎಸಿಪಿ ಮಧ್ಯಪ್ರವೇಶಿಸಿ, ಕಾರ್ಯಾಚರಣೆ ನಿಲ್ಲಿಸಿದರು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com