ಸಂಡೂರು: ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು 9 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಹೊಸದೊಂದು ರಾಜಕೀಯ ಇತಿಹಾಸ ಸೃಷ್ಟಿಸುವ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಮುಖಭಂಗವಾಗಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅನ್ನಪೂರ್ಣ ಅವರು 93,616 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರು 83,967 ಮತಗಳನ್ನು ಪಡೆದು 9,649 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಕ್ಷೇತ್ರದಲ್ಲಿ ತುಕಾರಾಂ ಪಾರಮ್ಯ ಮುಂದುವರೆದಿದೆ. ಜೊತೆಗೆ ಮೊದಲ ಬಾರಿಗೆ ಮಹಿಳೆ ಗೆದ್ದ ಇತಿಹಾಸ ಕೂಡ ನಿರ್ಮಾಣವಾಗಿದೆ.
ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಿಂದ ಸಂಡೂರು ಉಪಚುನಾವಣೆ ಕುತೂಹಲ ಮೂಡಿಸಿತ್ತು. ಚುನಾವಣೆಗಾಗಿ ಸಂಡೂರಲ್ಲಿ ತಾತ್ಕಾಲಿಕವಾಗಿ ಮನೆ ಮಾಡಿದ್ದ ಜನಾರ್ಧರ ರೆಡ್ಡಿ ಭರ್ಜರಿ ಪ್ರಚಾರ ನಡೆಸಿದ್ದರು. ಆದರೆ, ಸಂತೋಷ್ ಲಾಡ್ ಅವರ ರಣತಂತ್ರದ ಮುಂದೆ ರೆಡ್ಡಿಯವರ ಚಾಣಕ್ಯ ನೀತಿ ಫಲ ನೀಡಿಲ್ಲ. ಸಂಡೂರು ಕಾಂಗ್ರೆಸ್ ಪಕ್ಷದ ಭದ್ರಕೋಟೆ ಆಗಿದ್ದರೂ, ಚುನಾವಣೆಯನ್ನು ಲಘುವಾಗಿ ಪರಿಗಣಸಿದೆ ಕಾಂಗ್ರೆಸ್ ಒಗ್ಗಟ್ಟಿನ ಮಂತ್ರ ಪಠಿಸಿ ಭರ್ಜರಿ ಪ್ರಚಾರ ನಡೆಸಿತ್ತು.
ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ 2 ದಿನಗಳ ಕಾಲ ಉಳಿದು ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ನಡೆಸಿದ್ದರು. ಇತರ ಸಚಿವ ಸಂಪುಟದ ಸದಸ್ಯರೂ ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಿದ್ದರು. ಇದು ಕ್ಷೇತ್ರದ ಅಹಿಂದ ಮತಗಳನ್ನು ಒಗ್ಗೂಡಿಸಲು ಸಹಾಯ ಮಾಡಿದೆ. ಇದರ ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಸಾಂಪ್ರದಾಯಿಕ ಮತಗಳೂ ಕೈತಪ್ಪಿ ಹೋಗದಂತೆ ನೋಡಿಕೊಳ್ಳಲಾಗಿದೆ.
ಕಾಂಗ್ರೆಸ್ ಶಾಸಕ ಇ ತುಕಾರಾಂ ಅವರು ಲೋಕಸಭೆಗೆ ಆಯ್ಕೆಯಾದ ನಂತರ ಸಂಡೂರು ಕ್ಷೇತ್ರಕ್ಕೆ ಉಪಚುನಾವಣೆ ಅಗತ್ಯವಾಗಿತ್ತು. ಉಪಚುನಾವಣೆಗೆ ರಣತಂತ್ರ ಹೂಡಿದ್ದ ಕಾಂಗ್ರೆಸ್ ತುಕಾರಾಂ ಅವರ ಪತ್ನಿಯನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು.
ಗೆಲುವು ಕುರಿತು ಪ್ರತಿಕ್ರಿಯೆ ನೀಡಿರುವ ಅನ್ನಪೂರ್ಣ ಅವರು, ಸಿಎಂ ಸಿದ್ದರಾಮಯ್ಯ ಅವರ ಕ್ಲೀನ್ ಇಮೇಜ್ ಮತ್ತು ಅವರ ಕಾರ್ಯಶೈಲಿ ನನಗೆ ಸಹಾಯ ಮಾಡಿದೆ. ಅಲ್ಲದೇ ಸಚಿವ ಲಾಡ್, ಸಂಸದ ತುಕಾರಾಂ ಹಾಗೂ ನಮ್ಮ ಪಕ್ಷದ ಕಾರ್ಯಕರ್ತರೂ ಕೊಡುಗೆ ನೀಡಿದ್ದಾರೆ. ಕ್ಷೇತ್ರಕ್ಕಾಗಿ ದುಡಿಯುತ್ತೇನೆ. ಉತ್ತಮ ರಸ್ತೆಗಳು, ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಕುಡಿಯುವ ನೀರು ಒದಗಿಸುವುದಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.
ಬಂಗಾರು ಹನುಮಂತು ಅವರು ಮಾತನಾಡಿ, ರಾಜ್ಯ ಸರ್ಕಾರ ಹಣಬಲ ಬಳಸಿ ಗೆಲ್ಲಿಸುತ್ತಿದೆ ಎಂದು ಆರೋಪಿಸಿದ್ದಾರೆ.
Advertisement