HAL ವಿಮಾನ ನಿಲ್ದಾಣ ನವೀಕರಣ: ಮಾಸ್ಟರ್ ಪ್ಲಾನ್‌ಗೆ AAI ಒಪ್ಪಿಗೆ
ಬೆಂಗಳೂರು: ನಗರದ ಎಚ್‌ಎಎಲ್ ವಿಮಾನ ನಿಲ್ದಾಣದ ನವೀಕರಣಕ್ಕೆ ಸಂಬಂಧಿಸಿದ ಮಾಸ್ಟರ್ ಪ್ಲಾನ್'ಗೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಒಪ್ಪಿಗೆ ನೀಡಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭ ಮಾಡುವವರೆಗೂ ಈ ವಿಮಾನ ನಿಲ್ದಾಣ ನಗರದ ವಾಯು ಸಂಚಾರ ಅಗತ್ಯಗಳನ್ನು ಪೂರೈಸುತ್ತಿತ್ತು. ಇದೀಗ ರಕ್ಷಣಾ ಪಡೆಗಳು, ವಿಐಪಿಗಳು ಮತ್ತು ವಿವಿಐಪಿಗಳು ಮತ್ತು ಖಾಸಗಿ ಸಂಸ್ಥೆಗಳು ಬಳಸುವಂತಹ ಸರಾಸರಿ 12 ಸಣ್ಣ ವಿಮಾನಗಳು ಪ್ರತಿದಿನ ಎಚ್‌ಎಎಲ್ ವಿಮಾನ ನಿಲ್ದಾಣವನ್ನು ಬಳಸುತ್ತಿವೆ. ಈ ವಿಮಾನ ನಿಲ್ದಾಣದಲ್ಲಿ 30 ಪಾರ್ಕಿಂಗ್ ಸ್ಥಳಗಳನ್ನು ಹೊಂದಿದ್ದು, 24x7 ತೆರೆದಿರುತ್ತದೆ.
ಪ್ರಸ್ತುತ ಸಿದ್ಧಪಡಿಸಿರುವ ಮಾಸ್ಟರ್ ಪ್ಲಾನ್ 2047 ರವರೆಗೂ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡಲಿದೆ. ವರ್ಷಕ್ಕೆ 40 ಲಕ್ಷ ಪ್ರಯಾಣಿಕರನ್ನು ಹೊತ್ತೊಯ್ಯುವ ಗುರಿಯನ್ನು ಹೊಂದಿದೆ. ಪೀಕ್ ಅವರ್‌ಗಳಲ್ಲಿ ಗರಿಷ್ಠ 2,500 ಪ್ರಯಾಣಿಕರನ್ನು ನಿಭಾಯಿಸಬಲ್ಲದು. 2007-08 ರ ಆರ್ಥಿಕ ವರ್ಷದಲ್ಲಿ ಪ್ರಯಾಣಿಕರ ಸಂಚಾರಕ್ಕೆ ಬಂದ್ ಆಗುವುದಕ್ಕೂ ಮುನ್ನೂ 10 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸಿದೆ.
ಯೋಜನೆಯ ಹಂತ-I ರಲ್ಲಿ, ವಿಮಾನ ನಿಲ್ದಾಣದ ಪ್ರದೇಶವನ್ನು 21,885 ಚದರ ಮೀಟರ್‌ನಿಂದ 32,000 ಚದರ ಮೀಟರ್‌ಗೆ ವಿಸ್ತರಿಸಲಾಗುವುದು. ಟರ್ಮಿನಲ್ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಲಾಗುವುದು. ಒಂದು ಹಂತದಲ್ಲಿ 'ಆಗಮನ'. ಮತ್ತೊಂದು ಹಂತದಲ್ಲಿ 'ನಿರ್ಗಮನ'ಗಳ ಇರಲಿದೆ. ಪ್ರಸ್ತುತ ಇರುವ ನಿಲ್ದಾಣದಲ್ಲಿ ಆಗಮನ ಹಾಗೂ ನಿರ್ಗಮನ ಎರಡೂ ಒಂದೇ ಸ್ಥಳದಲ್ಲಿದೆ. ಇದಲ್ಲದೆ , ಮಲ್ಟಿ-ಲೆವೆಲ್ ಕಾರ್ ಪಾರ್ಕಿಂಗ್ ಸೌಲಭ್ಯ ಇರಲಿದ್ದು, 500 ಕಾರುಗಳನ್ನು ನಿಲುಗಡೆ ಮಾಡಬಹುದಾಗಿದೆ. ಟರ್ಮಿನಲ್ ಮುಂಭಾಗದ ದ್ವಿಪಥ ರಸ್ತೆಯನ್ನು ಚತುಷ್ಪಥವಾಗಿ ವಿಸ್ತರಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಮಾನ ನಿಲ್ದಾಣದ ರನ್‌ವೇಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಇಲ್ಲಿನ ರನ್ ವೇ 3,306 ಮೀಟರ್ ಉದ್ದ ಮತ್ತು 61 ಮೀಟರ್ ಅಗಲವನ್ನು ಹೊಂದಿದ್ದು, ಆಯಾಮದ ಪ್ರಕಾರ ಇದು ದೇಶದ ಅತ್ಯುತ್ತಮ ರನ್‌ವೇಗಳಲ್ಲಿ ಒಂದಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದೊಂದಿಗೆ ಆಗಿರುವ ಒಪ್ಪಂದದ ಪ್ರಕಾರ ನಮ್ಮ ವಿಮಾನ ನಿಲ್ದಾಣವು ಮೇ 2033 ರೊಳಗೆ ನಾಗರಿಕ ಕಾರ್ಯಾಚರಣೆಯನ್ನು ಆರಂಭಿಸಲಿದೆ. ಆ ಹೊತ್ತಿಗೆ ನಗರದಲ್ಲಿ ಎರಡು ವಿಮಾನ ನಿಲ್ದಾಣಗಳಿರಲಿವೆ. ನಗರದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಮತ್ತೊಂದು ವಿಮಾನ ನಿಲ್ದಾಣಕ್ಕೆ ಬೇಡಿಕೆ ಹೆಚ್ಚಾಗಿರುತ್ತದೆ. ಹೀಗಾಗಿ ಭವಿಷ್ಯಕ್ಕೆ ಸಜ್ಜಾಗುತ್ತಿದ್ದೇವೆಂದು ಹೇಳಿದ್ದಾರೆ.
ಹೆಚ್ಎಳ್ ವಿಮಾನ ನಿಲ್ದಾಣವನ್ನು ಜನವರಿ 1941 ರಲ್ಲಿ ತೆರೆಯಲಾಗಿತ್ತು. ಆದರೆ ವಾಣಿಜ್ಯ ಕಾರ್ಯಾಚರಣೆಗಳು ಐದು ವರ್ಷಗಳ ನಂತರ ಪ್ರಾರಂಭವಾಯಿತು. HAL ವಿಮಾನ ನಿಲ್ದಾಣವು ನೆರೆ ನಗರಗಳಿಗೆ ಪ್ರಾದೇಶಿಕ ಸಂಪರ್ಕ ಯೋಜನೆ (UDAAN) ಕಾರ್ಯಾಚರಣೆಗಳನ್ನು ಒದಗಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.