ಬೆಂಗಳೂರು: ನೆಲಮಂಗಲದಲ್ಲಿರುವ ತನ್ನ ಸಂಬಂಧಿಯನ್ನು ಭೇಟಿ ಮಾಡಲು ಬಂದಿದ್ದ ಆಂಧ್ರಪ್ರದೇಶದ ತಿರುಪತಿ ಮೂಲದ ಮಹಿಳೆಯೊಬ್ಬರು ಸ್ನಾನಗೃಹದಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.
ಮೃತ ಮಹಿಳೆಯನ್ನು ಲಕ್ಷ್ಮೀ (25) ಎಂದು ಗುರ್ತಿಸಲಾಗಿದೆ. ಆಂಧ್ರದ ತಿರುಪತಿಯಿಂದ ಅಡೇಪೇಟೆಯಲ್ಲಿರುವ ಸಂಬಂಧಿಕರೊಬ್ಬರ ಮನೆಗೆ ಲಕ್ಷ್ಮೀ ಅವರು ಪತ್ನಿ ವೆಂಕಟರಮಣ ಅವರೊಂದಿಗೆ ಬಂದಿದ್ದಾರೆ. ಕುಟುಂಬವು ಮಲ್ಲೇಶ್ವರಂನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಬೇಕಿತ್ತು. ಬೆಳಗ್ಗೆ 9.30ರ ಸುಮಾರಿಗೆ ಸ್ನಾನ ಮಾಡಲು ಲಕ್ಷ್ಮೀ ಸ್ನಾನಗೃಹಕ್ಕೆ ತೆರಳಿದ್ದಾರೆ.
25 ನಿಮಿಷ ಕಳೆದರೂ ಆಕೆ ಹೊರಗೆ ಬಾರದಿದ್ದಾಗ ಪತಿ ತಪಾಸಣೆಗೆ ಹೋಗಿ ನೋಡಿದಾಗ ಪ್ರಜ್ಞೆ ತಪ್ಪಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಆಕೆಯನ್ನು ಆಂಬ್ಯುಲೆನ್ಸ್‌ನಲ್ಲಿ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ವೈದ್ಯರು ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ವೆಂಕಟರಮಣ ಅವರು, ಪತ್ನಿ ಹೇಗೆ ಸಾವನ್ನಪ್ಪಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಸ್ನಾನಕ್ಕೆ ಹೋದ ಆಕೆ ಎಷ್ಟು ಹೊತ್ತಾದರೂ ಹೊರಗೆ ಬರಲಿಲ್ಲ. ಬೆಳಿಗ್ಗೆ 9:55 ರ ಸುಮಾರಿಗೆ ಹೋಗಿ ಮಾತನಾಡಿಸಿದಾಗ ಪ್ರತಿಕ್ರಿಯೆ ಬರಲಿಲ್ಲ. ಬಾಗಿಲು ತೆಗೆದು ನೋಡಿದಾಗ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿತು. ದೇಹವು ಸಂಪೂರ್ಣ ಕೋಲ್ಡ್ ಆಗಿತ್ತು. ನಾನು ಮತ್ತು ನನ್ನ ತಂಗಿ ಬಿಟ್ಟರೆ ಮನೆಯಲ್ಲಿ ಯಾರೂ ಇರಲಿಲ್ಲ. ಬಾತ್ ರೂಂನಲ್ಲಿ ಗ್ಯಾಸ್ ಗೀಸರ್ ಆಫ್ ಆಗಿತ್ತು. ಆದರೆ, ನನ್ನ ಹೆಂಡತಿಯ ಮುಖದಲ್ಲಿ ಗೀಚಿರುವ ಗುರುತುಗಳು ಕಂಡು ಬಂದಿತ್ತು ಎಂದು ಹೇಳಿದ್ದಾರೆ.
ಇದೀಗ ಸ್ಥಳಕ್ಕೆ ಎಫ್‌ಎಸ್‌ಎಲ್ ಮತ್ತು ಎಸ್‌ಒಸಿಒ ತಂಡಗಳು ಭೇಟಿ ನೀಡಿ ಮಾದರಿ ಮತ್ತು ಸುಳಿವುಗಳನ್ನು ಸಂಗ್ರಹಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಬಾತ್‌ರೂಮ್‌ನೊಳಗಿನ ಗ್ಯಾಸ್ ಗೀಸರ್‌ನಿಂದ ವಿಷಕಾರಿ ಕಾರ್ಬನ್ ಮಾನಾಕ್ಸೈಡ್ ಅನಿಲವನ್ನು ಉಸಿರಾಡಿದ್ದರಿಂದ ಆಕೆ ಸಾವನ್ನಪ್ಪಿರುವ ಸಾಧ್ಯತೆಗಳಿವೆ. ಆದರೆ, ಗೀಸರ್ ಆಫ್ ಆಗಿತ್ತು ಆಕೆಯ ಪತಿ ಹೇಳಿದ್ದಾರೆ. ಆಕೆಯ ಮುಖದ ಮೇಲಿನ ಗೀರುಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement