ಬೆಂಗಳೂರು: ಬಿಬಿಎಂಪಿಯ ಇಬ್ಬರು ಅಧಿಕಾರಿಗಳ ನಿವಾಸ, ಕಚೇರಿ ಸೇರಿದಂತೆ ಬೆಂಗಳೂರಿನ 20 ಕಡೆಗಳಲ್ಲಿ ಲೋಕಾಯುಕ್ತರು ಬುಧವಾರ ದಾಳಿ ನಡೆಸಿದ್ದಾರೆ.
ಅಪಾರ ಪ್ರಮಾಣದ ಅಕ್ರಮ ಹಣದ ವಹಿವಾಟು ಮತ್ತು ಅವರೊಂದಿಗೆ ಸಂಪರ್ಕ ಹೊಂದಿದ್ದ ಅಧಿಕಾರಿಗಳು, ಬಿಲ್ಡರ್‌ಗಳು ಮತ್ತು ಉದ್ಯಮಿಗಳಿಂದ ಅಕ್ರಮ ಆಸ್ತಿ ಗಳಿಕೆಯ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. ಬಿಲ್ಡರ್‌ಗಳು ಮತ್ತು ಕೈಗಾರಿಕೋದ್ಯಮಿಗಳ ನಿವಾಸಗಳು ಮತ್ತು ಕಚೇರಿಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ದೇವಯ್ಯ ಪಾರ್ಕ್ ಬಳಿಯಿರುವ ಮಹಿಳಾ ಬಿಬಿಎಂಪಿ ಕಲ್ಯಾಣ ಅಧಿಕಾರಿಯೊಬ್ಬರ ನಿವಾಸದಲ್ಲಿ ಲೋಕಾಯುಕ್ತ ತಂಡ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ. ವೈಯಾಲಿಕಾವಲ್ ಬಡಾವಣೆಯಲ್ಲಿರುವ ಉಪ ಲೆಕ್ಕಾಧಿಕಾರಿ ನಿವಾಸದ ಮೇಲೂ ದಾಳಿ ನಡೆದಿದೆ. ಬಿಬಿಎಂಪಿ ಪಶ್ಚಿಮ ವಲಯದ ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳ ಹಣವನ್ನು ಸಹಕಾರ ಸಂಘಗಳ ಖಾತೆಗಳಿಗೆ ವರ್ಗಾಯಿಸುವ ಮೂಲಕ ವಂಚನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಲೋಕಾಯುಕ್ತ ಡಿವೈಎಸ್ಪಿ ಸುನೀಲ್ ವೈ ನಾಯಕ್ ನೇತೃತ್ವದ ತಂಡ ದಾಳಿ ನಡೆಸಿದೆ. ಉದ್ಯಮಿಯೊಬ್ಬರ ಕತ್ರಿಗುಪ್ಪೆಯಲ್ಲಿರುವ ನಿವಾಸದ ಮೇಲೂ ದಾಳಿ ನಡೆದಿದೆ. ನಗರದಲ್ಲಿರುವ ಕೆಲ ಸಹಕಾರಿ ಸೊಸೈಟಿಗಳ ಕಚೇರಿಗಳ ಮೇಲೂ ದಾಳಿ ನಡೆಸಲಾಗಿದೆ. ಅಪಾರ ಪ್ರಮಾಣದ ಹಣ ವಹಿವಾಟು ಪ್ರಕರಣದಲ್ಲಿ ಅಧಿಕಾರಿಗಳು, ಬಿಲ್ಡರ್ ಗಳು ಹಾಗೂ ಉದ್ಯಮಿಗಳ ಸಂಪರ್ಕ ಕುರಿತು ಮಾಹಿತಿ ಸಂಗ್ರಹಿಸಿ ದಾಳಿ ನಡೆಸಲಾಗಿದೆ.
ಈ ಮಧ್ಯೆ ತುಮಕೂರಿನ ಆರ್ ಟಿಒ ಕಚೇರಿಯ ಮೇಲೆ 10ಕ್ಕೂ ಹೆಚ್ಚು ಲೋಕಾಯುಕ್ತ ಪೊಲೀಸರನ್ನೊಳಗೊಂಡ ತಂಡ ದಾಳಿ ನಡೆಸಿದೆ. ಬಿಹೆಚ್ ರಸ್ತೆಯಲ್ಲಿರುವ ಆರ್ ಟಿಒ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ದಾಳಿ ನಡೆದಿದೆ. ಇಡೀ ಕಚೇರಿಯನ್ನು ನಿಯಂತ್ರಣಕ್ಕೆ ತೆಗೆದುಕೊಡ ಲೋಕಾಯುಕ್ತ ಅಧಿಕಾರಿಗಳು ಎಲ್ಲಾ ಕೆಲಸಗಳನ್ನು ಪರಿಶೀಲಿಸಿದ್ದಾರೆ. ಕಚೇರಿಯ ಅಧಿಕಾರಿ ಹಾಗೂ ಸಂದರ್ಶಕರನ್ನು ಪ್ರಶ್ನಿಸಿದ್ದಾರೆ.
ಇತ್ತೀಚಿಗೆ ನವೆಂಬರ್ 12 ರಂದು ಬೆಂಗಳೂರು, ಬೀದರ್, ಬೆಳಗಾವಿ, ಧಾರವಾಡ, ಮೈಸೂರು, ದಾವಣಗೆರೆ ಜಿಲ್ಲೆಯ ಸರ್ಕಾರಿ ಅಧಿಕಾರಿಗಳ ಕಚೇರಿ ಹಾಗೂ ನಿವಾಸದ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದರು. ಅಧಿಕಾರಿಗಳ ಮನೆಯಿಂದ ಅಪಾರ ಪ್ರಮಾಣದ ನಗದು ಹಾಗೂ ಚಿನ್ನಾಭರಣ ವಶಕ್ಕೆ ಪಡೆದಿದ್ದರು.
Advertisement