ಬೆಂಗಳೂರು: ತಾಯಿಯನ್ನು ಕೊಲೆ ಮಾಡಿದ ತಂದೆಯ ವಿರುದ್ಧವೇ 5 ವರ್ಷದ ಮಗಳು ನೀಡಿದ ಸಾಕ್ಷಿ ಆತನಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಿದೆ.
5 ವರ್ಷದ ಬಾಲಕಿಯ ಸಾಕ್ಷಿಯನ್ನು ಗಂಭೀರವಾಗಿ ಪರಿಗಣಿಸಿದ 45ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮೊಹಮ್ಮದ್ ಮೊಹಿನುದ್ದೀನ್ ಅವರು, ಅಪರಾಧಿಗೆ ಜೀವಾವಧಿ ಶಿಕ್ಷೆ (Life imprisonment) ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೂಡುಬಗ್ಗೆ ಗ್ರಾಮದವರಾದ ರವಿರಾಜ್ ಶೆಟ್ಟಿ (42) 2010 ರಲ್ಲಿ ಸುಪ್ರೀತಾ ಎಂಬುವವರನ್ನು ವಿವಾಹವಾಗಿದ್ದ. ಕುಟುಂಬವು ಹಲಸೂರು ಬಳಿ ನೆಲೆಸಿತ್ತು. ಚಿಕ್ಕಪುಟ್ಟ ವಿಚಾರಗಳಿಗೆ ದಂಪತಿ ನಿತ್ಯ ಜಗಳವಾಡುತ್ತಿದ್ದರು.
42 ವರ್ಷ ವಯಸ್ಸಿನ ರವಿರಾಜ್ ಶೆಟ್ಟಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಕಾರ್ಗೋ ಕಂಪನಿಯಲ್ಲಿ ಆಮದು ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ. 2016 ರಲ್ಲಿ ಘಟನೆ ನಡೆದಿದ್ದು, ಆಗ ಬಾಲಕಿ ಎಲ್‌ಕೆಜಿ ಓದುತ್ತಿದ್ದಳೆಂದು ತಿಳಿದುಬಂದಿದೆ.
ಸೆಪ್ಟೆಂಬರ್ 14, 2016 ರಂದು ಶೆಟ್ಟಿ ಕೆಲಸದಿಂದ ಮನೆಗೆ ವಾಪಸ್ಸಾಗಿದ್ದು, ಈ ವೇಳೆ ಸುಪ್ರೀತಾ ಮಗಳನ್ನು ಮಲಗಿಸುತ್ತಿದ್ದಹು. ಬಳಿಕ ರವಿರಾಜ್ ಸುಪ್ರೀತಾ ಅವರಿಗೆ ಊಟ ಬಡಿಸುವಂತೆ 2 ಬಾರಿ ಕೇಳಿದ್ದಾನೆ. ಈ ವೇಳೆ ಸುಪ್ರೀತಾ ಸ್ವಲ್ಪ ಹೊತ್ತು ಕಾಯುವಂತೆ ಹೇಳಿದ್ದು, ಇದರಿಂದ ಕೋಪಗೊಂಡ ರವಿರಾಜ್ ಪತ್ನಿಯ ತಲೆಕೂದಲನ್ನು ಹಿಡಿದು ಮನೆಯ ಆವರಣಕ್ಕೆ ಎಳೆದು ಕಪಾಳಮೋಕ್ಷ ಮಾಡಿದ್ದಾನೆ. ಈ ವೇಳೆ ಸುಪ್ರೀತಾ ಕೂಡ ಪತಿಗೆ ಹೊಡೆದಿದ್ದಾರೆ. ಬಳಿಕ ಮತ್ತಷ್ಟು ಕುಪಿತನಾಗಿರುವ ರವಿರಾಜ್ ಅಡುಗೆ ಮನೆಗೆ ಎಳೆದೊಯ್ದು ಚಾಕುವಿನಿಂದ ಬೆನ್ನು ಹಾಗೂ ಕುತ್ತಿಗೆಗೆ 22 ಬಾರಿ ಇರಿದು ಕೊಂದಿದ್ದಾನೆ. ಘಟನೆಯನ್ನು ಬಾಲಕಿ ನೋಡಿದ್ದು, ಭಯದಲ್ಲಿ ರೂಮಿಗೆ ಹೋಗಿ ನಿದ್ರೆ ಮಾಡುತ್ತಿರುವಂತೆ ನಟಿಸಿದ್ದಾಳೆ. ಇತ್ತ ರವಿರಾಜ್ ಸಂಬಂಧಿಕರಿಗೆ ಕರೆ ಮಾಡಿ, ಸುಪ್ರೀತಾ ಕತ್ತು ಕೊಯ್ದುಕೊಂಡಿದ್ದಾಳೆಂದು ಹೇಳಿದ್ದಾರೆ.
2022ರ ಜುಲೈ ತಿಂಗಳಿನಲ್ಲಿ ಪ್ರಕರಣದ ವಿಚಾರಣೆ ವೇಳೆ 11 ವರ್ಷದವಳಾಗಿದ್ದ ಬಾಲಕಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾಳೆ. ನೆರೆಮನೆಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ ಬಾಲಕಿ, ತನ್ನ ತಂದೆಯೇ ಕೊಲೆಗಾರ ಎಂದು ಹೇಳಿದ್ದಾಳೆ. ಅಲ್ಲದೆ, ಭಯದಿಂದ ನಿದ್ರೆ ಬಂದಂತೆ ನಟಿಸಿದ್ದೆ ಎಂದಿದ್ದು, ನಡೆದ ಘಟನೆಯನ್ನು ವಿವರಿಸಿದ್ದಾಳೆ.
ವಿಚಾರಣೆ ವೇಳೆ ಪ್ರತಿವಾದಿ ವಕೀಲರ ಅಡ್ಡ ಪರೀಕ್ಷೆ ಸಂದರ್ಭದಲ್ಲಿಯೂ ಬಾಲಕಿ, ತಾನು ಕುಟುಂಬ ಸದಸ್ಯರ ಮಾತು, ಪ್ರಭಾವಕ್ಕೆ ಒಳಗಾಗಿಲ್ಲ ಎಂಬುದನ್ನು ತಿಳಿಸಿದ್ದು, ಹೇಳಿಕೆಯನ್ನೇ ಪುನರುಚ್ಛರಿಸಿದ್ದಾಳೆ.
ಈ ನಡುವೆ ಪೊಲೀಸರ ವಿಚಾರಣೆ ವೇಳೆಯೂ ರವಿರಾಜ್, ಪತ್ನಿ ಸುಪ್ರೀತಾ ಜೊತೆಗೆ ಹೊಂದಾಣಿಕೆ ಸಮಸ್ಯೆಗಳಿರುವುದಾಗಿ ಹಾಗೂ ಪತ್ನಿ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಅವಕಾಶಕ್ಕಾಗಿ ಕಾಯುತ್ತಿದ್ದೆ. ಆಕೆ ಹಲ್ಲೆ ನನ್ನ ಮೇಲೆ ಹಲ್ಲೆ ನಡೆಸಿದ್ದಳು ಎಂದು ಪೊಲೀಸರಿಗೆ ಹೇಳಿಕೆ ನೀಡಿರುವುದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಹಲಸೂರು ಪೊಲೀಸ್ ಇನ್ಸ್‌ಪೆಕ್ಟರ್ ಸುಬ್ರಹ್ಮಣ್ಯ ಅವರು ಬಾಲಕಿಯ ಹೇಳಿಕೆ ಹಾಗೂ ವೈಜ್ಞಾನಿಕ ಸಾಕ್ಷ್ಯಾಧಾರಗಳೊಂದಿಗೆ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
Advertisement