ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮನವಿ ಸಲ್ಲಿಸಿದ ಕೇವಲ 24 ಗಂಟೆಗಳಲ್ಲೇ ಮಂಜೂರಾಗಿದ್ದ 14 ನಿವೇಶನಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ರದ್ದುಪಡಿಸಿದೆ.
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಒಡೆತನದ 3.16 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು 50:50 ಪರಿಹಾರ ಯೋಜನೆಯಡಿ ಮಂಜೂರು ಮಾಡಿದ ಈ ನಿವೇಶನಗಳು ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ವಿಶೇಷ ನ್ಯಾಯಾಲಯದ ಆದೇಶದ ನಂತರ ಲೋಕಾಯುಕ್ತ ಅಧಿಕಾರಿಗಳು ಸಿಎಂ ಮತ್ತು ಅವರ ಸಂಬಂಧಿಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಮಾರಾಟ ಪತ್ರಗಳ ರದ್ದತಿಯನ್ನು ಮುಡಾ ಆಯುಕ್ತ ಎಎನ್ ರಘುನಂದನ್ ಅವರು ದೃಢಪಡಿಸಿದ್ದಾರೆ. ಮಂಗಳವಾರ ಬೆಳಗ್ಗೆ 9.30ಕ್ಕೆ ಪಾರ್ವತಿ ಪರವಾಗಿ ಕಾಂಗ್ರೆಸ್ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಅವರು ನಮಗೆ ಪತ್ರ ನೀಡಿದ್ದಾರೆ ಎಂದು ಹೇಳಿದ್ದಾರೆ.
ಕಾನೂನು ತಜ್ಞರನ್ನು ಸಂಪರ್ಕಿಸಿ, ಕೆಲವು ಕಾರ್ಯವಿಧಾನಗಳು ಮತ್ತು ಕಾಯಿದೆಗಳನ್ನು ಅನುಸರಿಸಿದ ನಂತರ ಅಧಿಕೃತವಾಗಿ ಮಾರಾಟ ಪತ್ರಗಳನ್ನು ರದ್ದುಗೊಳಿಸಿದ್ದೇವೆ. 14 ನಿವೇಶನಗಳಿಗೆ ಸಂಬಂಧಿಸಿದ ಸೇಲ್ ಡೀಡ್ ಗಳನ್ನು ರದ್ದುಪಡಿಸುವಂತೆ ಸ್ಥಳೀಯ ಸಬ್ ರಿಜಿಸ್ಟ್ರಾರ್ ಗೆ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ,
ಮುಡಾದಲ್ಲಿ ಇದು ಮೊದಲ ಪ್ರಕರಣವಾಗಿದೆ. ಕೆಲವು ಕಾರ್ಯವಿಧಾನಗಳು ಮತ್ತು ಕಾಯಿದೆಗಳು ನಮಗೆ ಅವಕಾಶ ಮಾಡಿಕೊಟ್ಟಿದ್ದು, ಹೀಗಾಗಿ ಪಾರ್ವತಿ ಅವರಿಗೆ ನೀಡಲಾದ ನಿವೇಶನಗಳನ್ನು ರದ್ದುಗೊಳಿಸಿದ್ದೇವೆಂದು ಹೇಳಿದರು.
ಇದೇ ವೇಳೆ ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತರು ದಾಖಲೆಗಳನ್ನು ಕೇಳಿದ್ದಾರೆಯೇ ಎಂಬ ಬಗ್ಗೆ ಪ್ರಶ್ನೆಗೆ ಉತ್ತರಿಸಿ, ತನಿಖೆಗೆ ನಮ್ಮ ಸಹಕಾರವನ್ನು ಕೋರಿ ಸಂಸ್ಥೆ ನಮಗೆ ಪತ್ರ ಬರೆದಿದ್ದಾರೆ, ನಾವು ನಮ್ಮ ಸಹಕಾರವನ್ನು ನೀಡುತ್ತೇವೆ ಎಂದು ಹೇಳಿದರು.
ಈ ನಡುವೆ ಮುಡಾ ಆಯುಕ್ತರಿಗೆ ಪಾರ್ವತಿ ಅವರು ಬರೆದ ಪತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
14 ನಿವೇಶನಗಳ ಖಾತಾಗಳನ್ನು (ಮಾಲೀಕತ್ವದ ದಾಖಲೆಗಳು) ಪಾರ್ವತಿ ಅವರ ಹೆಸರಿಗೆ ಬಹಳ ಹಿಂದೆಯೇ ನೀಡಲಾಗಿದೆ, ಹೀಗಾಗಿ ಇದು ಪ್ರಕ್ರಿಯೆನ್ನು ಸಂಕೀರ್ಣಗೊಳಿಸುತ್ತದೆ ಎಂದು ಭಾವಿಸಿದ್ದೆವು. ಆದರೂ, ನಿವೇಶನ ಮಂಜೂರಾತಿ ಪತ್ರವನ್ನು ರದ್ದುಪಡಿಸಿ, ನಿವೇಶನಗಳನ್ನು ಹಿಂಪಡೆದುಕೊಂಡಿರುವುದು ಅಚ್ಚರಿ ಮೂಡಿಸುತ್ತಿದೆ ಎಂದು ಮುಡಾದ ನಿವೃತ್ತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಾರಾಟ ಪತ್ರಗಳನ್ನು ರದ್ದುಗೊಳಿಸುವ ಕ್ರಮವನ್ನು ಪ್ರಾರಂಭಿಸುವ ಮೊದಲು ನಗರಾಭಿವೃದ್ಧಿ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಏತನ್ಮಧ್ಯೆ ಈ ಬೆಳವಣಿಗೆ ಸಿದ್ದರಾಮಯ್ಯ ಹಾಗೂ ಅವರ ಆಪ್ತ ವಲಯಕ್ಕೆ ಕೊಂಚ ಸಮಾಧಾನ ತಂದಂತಿದೆ ಎನ್ನಲಾಗುತ್ತಿದೆ.
Advertisement