ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಗರಣ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅೇವರ ಕುಟುಂಬದ ಸದಸ್ಯರು ಅಸಮಾಧಾನಗೊಂಡಿದ್ದು, ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಮತ್ತು ಜೆಡಿಎಸ್ ದೊಡ್ಡ ಷಡ್ಯಂತ್ರ ನಡೆಸಿವೆ ಎಂದು ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಅವರ ಸಹೋದರ ರಾಮೇಗೌಡ ಅವರ ಪುತ್ರ ರಘು ಅವರು ಮಾತನಾಡಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ 14 ನಿವೇಶನಗಳನ್ನು ಹಿಂದಿರುಗಿಸುವ ದೊಡ್ಡಮ್ಮ (ಪಾರ್ವತಿ) ಅವರ ನಿರ್ಧಾರ ಸರಿಯಾಗಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು 1983 ರಲ್ಲಿ ರಾಜಕೀಯಕ್ಕೆ ಬಂದಾಗಿನಿಂದಲೂ ತಮ್ಮ ಪ್ರಭಾವ ಬಳಸಿ ಕುಟುಂಬ ಸದಸ್ಯರಿಗೆ ಯಾವುದೇ ಅನುಕೂಲಗಳನ್ನೂ ಮಾಡಿಕೊಟ್ಟಿಲ್ಲ. ನಾವು ಕೂಡ ಏನನ್ನೂ ಕೇಳು ಹೋಗಿಲ್ಲ. ಹಾಗೆ ಮಾಡಿದ್ದರೆ ಐಷಾರಾಮಿ ಜೀವನ ನಡೆಸಬಹುದಿತ್ತು. ನಾನು ಕೂಡ ಲೋನ್ ಪಡೆದು ಬೈಕ್ ಖರೀದಿಸಬೇಕಾಗಿರುತ್ತಿರಲಿಲ್ಲ ಎಂದು ಹೇಳಿದರು.
ಮುಡಾ ವಿಚಾರದಲ್ಲಿನ ಬೆಳವಣಿಗೆಗಳ ಬಗ್ಗೆ ನನ್ನ ದೊಡ್ಡಮ್ಮ ತೀವ್ರ ಅಸಮಾಧಾನಗೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಸೈಟ್‌ಗಳನ್ನು ವಾಪಸ್ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಯಾವುದೇ ಕೆಲಸದಲ್ಲೂ ಅವರು ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅಸಮಾಧಾನಗೊಂಡ ಕೆಲವರು ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳ ಸೋದರ ಸಂಬಂಧಿ ಸಿದ್ದರಾಮು ಅವರು ಮಾತನಾಡಿ, ಕಳೆದ ನಾಲ್ಕು ದಶಕಗಳಿಂದ ಸಿದ್ದರಾಮಯ್ಯ ಸ್ವಚ್ಛ ಸಾರ್ವಜನಿಕ ಜೀವನವನ್ನು ಹೊಂದಿದ್ದು, ಯಾರೋ ಸಿಎಂ ಖ್ಯಾತಿಗೆ ಮಸಿ ಬಳಿಯಲು ಸಂಚು ರೂಪಿಸಿದ್ದಾರೆ. ಪಾರ್ವತಿ ಅವರು ಯಾವುದೇ ತಪ್ಪು ಮಾಡಿಲ್ಲ, ಆಕೆಯನ್ನು ಅಪರಾಧಿ ಎಂದು ಬಿಂಬಿಸುತ್ತಿರುವುದು ಕುಟುಂಬಕ್ಕೆ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 14 ನಿವೇಶನ ಹಂಚಿಕೆ ಮಾಡಿತ್ತು. ಈ ಬಗ್ಗೆ ಕುಟುಂಬ ಸದಸ್ಯರು ಪಾರ್ವತಿ ಅವರೊಂದಿಗೆ ಹಲವು ಬಾರಿ ಮಾತನಾಡಿದ್ದಾರೆ. ಹಗರಣದಲ್ಲಿ ದೊಡ್ಡಮ್ಮ ಮತ್ತು ದೊಡ್ಡಪ್ಪ ಹೊರಬರುತ್ತಾರೆಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.
ಈ ನಡುವೆ ಸಿದ್ದರಾಮಯ್ಯನವರ ಸಿದ್ದರಾಮನ ಹುಂಡಿಯಲ್ಲಿ ಮಹಿಳೆಯರು ಕೂಡ ಈ ಬೆಳವಣಿಗೆಯಿಂದ ಅಸಮಾಧಾನಗೊಂಡಿದ್ದು, ಗ್ರಾಮಸ್ಥರು ಇತ್ತೀಚೆಗೆ ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ.
Advertisement