'ಸಾವರ್ಕರ್ ಬ್ರಾಹ್ಮಣರಾದರೂ ಗೋಮಾಂಸ ತಿನ್ನುತ್ತಿದ್ದರು, ಜಿನ್ನಾ ಹಂದಿಮಾಂಸ ಸೇವಿಸಿದ್ದರು': ದಿನೇಶ್ ಗುಂಡೂರಾವ್

ಬೆಂಗಳೂರಿನಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಜಾಗೃತ ಕರ್ನಾಟಕ ಮತ್ತು ಅಹರ್ನಿಶಿ ಪ್ರಕಾಶನ ಅವರು ಆಯೋಜಿಸಿದ್ದ ‘ಗಾಂಧೀಜಿಯ ಹಂತಕ’ ಪುಸ್ತಕ ಬಿಡುಗಡೆ, ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದರು.
Dinesh Gundu rao
ದಿನೇಶ್ ಗುಂಡೂರಾವ್
Updated on

ಬೆಂಗಳೂರು: ಸಾವರ್ಕರ್ ಗೋಹತ್ಯೆಯ ವಿರೋಧಿಯಲ್ಲ. ಅವರು ಚಿತ್ಪಾವನ ಬ್ರಾಹ್ಮಣರಾಗಿದ್ದರಾದರೂ ಮಾಂಸಾಹಾರಿಯಾಗಿದ್ದರು ಮತ್ತು ಗೋಮಾಂಸ ಸೇವಿಸುತ್ತಿದ್ದರು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಗಾಂಧೀ ಜಯಂತಿ ಪ್ರಯುಕ್ತ ಜಾಗೃತ ಕರ್ನಾಟಕ ಮತ್ತು ಅಹರ್ನಿಶಿ ಪ್ರಕಾಶನ ಅವರು ಆಯೋಜಿಸಿದ್ದ ‘ಗಾಂಧೀಜಿಯ ಹಂತಕ’ ಪುಸ್ತಕ ಬಿಡುಗಡೆ, ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದರು.

ಈ ವೇಳೆ ದೇಶದಲ್ಲಿ ಗಾಂಧೀವಾದ ಗೆಲ್ಲಬೇಕೇ ಹೊರತು ಸಾವರ್ಕರ್ ಅವರ ವಾದ ಅಲ್ಲ. ಗೋಡ್ಸೆಗೆ ಉತ್ತರ ಗಾಂಧೀಜಿಯವರೇ. ಗಾಂಧೀಜಿಯವರ ಹತ್ಯೆ ಮಾಡಿದ ಗೋಡ್ಸೆ, ಸಾವರ್ಕರ್ ವಾದದಿಂದ ಪ್ರಭಾವಿತರಾಗಿದ್ದರು. ದೇಶದಲ್ಲಿ ಇಂದು ಗಾಂಧೀವಾದ ಎದುರು ಸಾವರ್ಕರ್ ಅವರ ವಾದ ಗೆಲ್ಲುತ್ತಿದೆಯೇ ಎಂಬ ಅನುಮಾನ ನಮ್ಮನ್ನು ಕಾಡುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಸಾವರ್ಕರ್ ಅವರಲ್ಲಿ ವೈಚಾರಿಕ ಚಿಂತನೆಗಳು, ರಾಷ್ಟ್ರೀಯವಾದ ಕಾಣಲು ಸಾಧ್ಯವಾದರೂ, ಪ್ರಜಾಪ್ರಭುತ್ವದ ಪರವಾದ ವ್ಯಕ್ತಿತ್ವ ಇರಲಿಲ್ಲ. ಆದರೆ ಗಾಂಧೀಜಿ ಅವರದ್ದು ಡೆಮಾಕ್ರೆಟಿಕ್ ವ್ಯಕ್ತಿತ್ವ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಸಾವರ್ಕರ್ ಮಾಂಸಾಹಾರಿ, ಗೋಮಾಂಸ ಸೇವಿಸುತ್ತಿದ್ದರು

ಬ್ರಾಹ್ಮಣ ಸಮಾಜದ ಸಾವರ್ಕರ್ ಅವರು ಮಾಂಸ ಸೇವಿಸುತ್ತಿದ್ದರು.‌ ಮಾಂಸಹಾರ ಸೇವನೆಯನ್ನು ಅವರು ಬಹಿರಂಗವಾಗಿ ಸಮರ್ಥಿಸುತ್ತಿದ್ದರು. ಹಾಗೆ ನೋಡಿದರೆ ಸಾವರ್ಕರ್ ಒಂದು ರೀತಿಯಲ್ಲಿ ಮಾಡರ್ನಿಷ್ಟ್ ಆಗಿಯೂ ಕಾಣುತ್ತಾರೆ. ಆದರೆ ಮೂಲಭೂತವಾದಿಯಾಗಿದ್ದರು ಎಂಬುದರಲ್ಲಿ ಸಂಶಯವಿಲ್ಲ. ಮೂಲಭೂತವಾದ ನಮ್ಮ ಭಾರತ ದೇಶದ ಸಂಸ್ಕೃತಿಯಲ್ಲ. ಇದು ಯುರೋಪ್‌ನಿಂದ ಬಂದಿರುವಂತದ್ದು. ಸಾವರ್ಕರ್ ಯೂರೋಪ್‌ನಿಂದ ಸಾಕಷ್ಟು ಪ್ರಭಾವ ಹೊಂದಿದ್ದರು. ಆದರೆ ಗಾಂಧೀಜಿಯವರು ಸಸ್ಯಹಾರಿ. ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಮೇಲೆ ಗಾಂಧೀಜಿಯವರಿಗೆ ಅಪಾರವಾದ ನಂಬಿಕೆ ಇತ್ತು ಎಂದರು.

Dinesh Gundu rao
ಗಲಾಟೆ-ದಂಗೆ ಎಬ್ಬಿಸಲು, ಬೊಬ್ಬೆ ಹಾಕಿ ಸುಳ್ಳನ್ನು ಸತ್ಯ ಮಾಡಲು RSS ನಿಂದ ತರಬೇತಿ: ದಿನೇಶ್ ಗುಂಡೂರಾವ್

ಸಂಪ್ರದಾಯಸ್ಥರೆಲ್ಲ ಮೂಲಭೂತವಾದಿಗಳಲ್ಲ

ಇಂದು ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಂಪ್ರದಾಯಸ್ಥರಿದ್ದಾರೆ. ಸಂಪ್ರದಾಯಸ್ಥರೆಲ್ಲ ಮೂಲಭೂತವಾದಿಗಳಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು. ಸಾಂಪ್ರದಾಯಿಕವಾಗಿರುವ ಅನೇಕ ಜನರಿದ್ದಾರೆ ಆದರೆ ಮೂಲಭೂತವಾದವು ಅವರ ತತ್ವ ಎಂದು ಅರ್ಥವಲ್ಲ. ಮೂಲಭೂತವಾದದ ವಿರುದ್ಧದ ಹೋರಾಟದಲ್ಲಿ ಈ ಅಂಶವನ್ನು ಅರಿತು ನಾವು ಮುಂದೆ ಸಾಗಬೇಕಿದೆ. ‘ಗೋಡ್ಸೆವಾದದ ವಿರುದ್ಧದ ಈ ಹೋರಾಟದಲ್ಲಿ ಸಂಪ್ರದಾಯವಾದಿಗಳನ್ನೂ ಒಳಗೊಳ್ಳಬೇಕು.

ಗಾಂಧೀಜಿಯ ಹಂತಕ ಗೋಡ್ಸೆ ಎಂಬ ವ್ಯಕ್ತಿ ಮತ್ತು ಆತನ ದೃಷ್ಟಿಯ ಭಾರತ” ಪುಸ್ತಕ ಗಾಂಧೀಜಿಯವರ ಬಗ್ಗೆ ಸಾಕಷ್ಟು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದೆ. ಯಾರ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸದೇ, ವಿವರಗಳನ್ನ ಮಾತ್ರ ನೀಡಿರುವುದು ಪುಸ್ತಕದ ವಿಶೇಷ. ನಮ್ಮ ಯುವಕರು ಇಂಥಹ ಪುಸ್ತಕಗಳನ್ನು ಹೆಚ್ಚು ಓದುವ ಮೂಲಕ ನಿಜಾಂಶಗಳನ್ನು ತಿಳಿದುಕೊಳ್ಳಬೇಕು ಎಂದು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

‘ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂಬುದು ಅವರ ಅಭಿಮಾನಿಗಳ ವಾದ. ಬ್ರಿಟಿಷರು ಅವರನ್ನು ಜೈಲಿಗೂ ಹಾಕಿದ್ದರು. ಈ ವಿಚಾರವನ್ನು ಮುಂದಿಟ್ಟುಕೊಂಡು ಅವರನ್ನು ಎದುರಿಸುವುದು ಕಷ್ಟ’ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com