
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚಿದಂತೆಯೇ ರೋಡ್ ರೇಜ್ ಪ್ರಕರಣಗಳೂ ಕೂಡ ಹೆಚ್ಚಾಗುತ್ತಿದ್ದು, ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಟೋ ಚಾಲಕನ ವಿಡಿಯೋ ವೈರಲ್ ಆಗುತ್ತಿದೆ.
ಹೌದು.. ನಗರದಲ್ಲಿ ಆಗಿಂದಾಗ್ಗೆ ಆಟೋ ಚಾಲಕರು ಮತ್ತು ಪ್ರಯಾಣಿಕರ ನಡುವಿನ ಕಿರಿಕ್ ನಡೆಯುತ್ತಿರುತ್ತದೆ. ಈ ಪಟ್ಟಿಗೆ ಇದೀಗ ಮತ್ತೊಂದು ಪ್ರಕರಣ ಹೊಸ ಸೇರ್ಪಡೆಯಾಗಿದ್ದು, ಆಟೋ ಚಾಲಕನೋರ್ವ ಯುವತಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಘಟನೆ ವರದಿಯಾಗಿದೆ.
ಏನಿದು ಘಟನೆ?
ಯುವತಿಯೊಬ್ಬಳು ಸಿಲ್ಕ್ ಬೋರ್ಡ್ ಪ್ರಯಾಣಿಸಲು ಆಟೋ ಚಾಲಕನೊಬ್ಬನನ್ನು ವಿಚಾರಿಸಿದ್ದು, ಈ ವೇಳೆ ಆತ ದುಬಾರಿ ಹಣ ಕೇಳಿದ್ದಾನೆ. ಇದಕ್ಕೆ ಯುವತಿ ಹೆಚ್ಚಿನ ಬಾಡಿಗೆ ಕೊಡುವುದಿಲ್ಲ ಎಂದು ಹೇಳಿದ್ದು, ಈ ವೇಳೆ ಚಾಲಕ ಯುವತಿಯೊಂದಿಗೆ ಜಗಳಕ್ಕೇ ಇಳಿದಿದ್ದಾನೆ.
ಮಹಿಳಾ ಪ್ರಯಾಣಿಕರೊಬ್ಬರು ಆಟೋ ಹತ್ತುವಾಗಲೇ ಚಾಲಕ ಹೆಚ್ಚಿನ ಹಣ ಕೇಳಿದ್ದಾನೆ. ಆಕೆ 150 ರೂ. ಕೊಡುವುದಾಗಿ ಹೇಳಿದಾಗ ಕೋಪಗೊಂಡ ಚಾಲಕ ಆಕೆ ಮೇಲೆ ರೇಗಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಸಿಲ್ಕ್ ಬೋರ್ಡ್ ಇಲ್ಲೇ ಪಕ್ಕದಲ್ಲಿ ಇದ್ಯಾ ಎಂದು ಆಕ್ರೋಶಭರಿತನಾಗಿ ಹೇಳಿದ್ದಾನೆ. ಅಲ್ಲದೆ ಹಣ ಕೊಡೋ ಯೋಗ್ಯತೆ ಇಲ್ಲ ಎಂದು ಛೇಡಿಸಿದ್ದಾನೆ.
ಆಟೋ ಚಾಲಕನ ವರ್ತನೆಯನ್ನು ಯುವತಿ ವಿಡಿಯೋ ಮಾಡಿಕೊಂಡು ನಗರ ಪೊಲೀಸರಿಗೆ ಎಕ್ಸ್ ಖಾತೆಯಲ್ಲಿ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ. ನಗರ ಪೊಲೀಸರು ಯುವತಿ ಹಾಕಿರುವ ಪೋಸ್ಟ್ ಗಮನಿಸಿ ಘಟನೆ ನಡೆದ ಸ್ಥಳದ ಬಗ್ಗೆ ನಿಖರ ಮಾಹಿತಿ ನೀಡುವಂತೆ ಕೇಳಿದ್ದಾರೆ.
ಈ ಹಿಂದೆ ಅಂದರೆ ಸೆಪ್ಟೆಂಬರ್ 2ರಂದು ಇದೇ ರೀತಿಯ ಘಟನೆ ವರದಿಯಾಗಿತ್ತು. ಮಾಗಡಿ ರಸ್ತೆ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಟೋ ಬುಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಆಟೋ ಚಾಲಕ ಯುವತಿಗೆ ನಿಂದಿಸಿದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಅದೇ ರೀತಿಯ ಮತ್ತೊಂದು ಘಟನೆ ನಗರದಲ್ಲಿ ನಡೆದಿದೆ. ಈ ರೀತಿ ವರ್ತಿಸಿದರೆ ಮಹಿಳಾ ಪ್ರಯಾಣಿಕರು ಆಟೋಗಳಲ್ಲಿ ಪ್ರಯಾಣಿಸಲು ಹಿಂದೇಟು ಹಾಕುವುದರಲ್ಲಿ ಸಂಶಯವಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
9 ಸಾವಿರ ಟ್ರಾಫಿಕ್ ದಂಡ ಬಾಕಿ, ಇನ್ಶುರೆನ್ಸ್ ಕೂಡ ಇಲ್ಲ!
ಇನ್ನು ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆಟೋ ನಂಬರ್ KA 05 AL 9980 ಆಗಿದ್ದು, ಚಾಲಕನ ಹೆಸರು ಸಂತೋಷ್ ಕುಮಾರ್ ಎಸ್ ಎಂದು ನಮೂದಾಗಿದೆ. ಈ ಆಟೋ ಮೇಲೆ ಬರೊಬ್ಬರಿ 9 ಸಾವಿರ ರೂ ಟ್ರಾಫಿಕ್ ದಂಡ ಬಾಕಿ ಉಳಿದಿದೆ ಎನ್ನಲಾಗಿದೆ. ಮಾತ್ರವಲ್ಲದೇ ಆಟೋ ವಿಮೆ ಕೂಡ ಎಕ್ಸ್ ಪೈರಿ ಯಾಗಿದೆ ಎಂದು ಹೇಳಲಾಗಿದೆ. ಈ ಕುರಿತ ಪೋಸ್ಟ್ ಗಳನ್ನೂ ಕೂಡ ನೆಟ್ಟಿಗರು ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.
Advertisement