ಮಂಗಳೂರು: ಅಲ್ಪಸಂಖ್ಯಾತ ಸಮುದಾಯದವರು ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸದಂತೆ ಹಿಂದೂಗಳಿಗೆ ಸಲಹೆ ನೀಡಿದ ಮಂಗಳೂರಿನ ಖಾಸಗಿ ಕಾಲೇಜಿನ ಉಪನ್ಯಾಸಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಂಗಳೂರು ನಗರದ ಹೊರವಲಯದ ಕಿನ್ಯದ ಕೇಶವ ಶಿಶು ಮಂದಿರದಲ್ಲಿ ಇತ್ತೀಚಿಗೆ ನಡೆದ ನವ ದಂಪತಿಗಳ ಸಮಾವೇಶದಲ್ಲಿ ಮಾತನಾಡಿದ್ದ ಡಾ. ಅರುಣ್ ಉಳ್ಳಾಲ್ ಎಂಬುವವರು ದ್ವೇಷ ಭಾಷಣ ಮಾಡಿದ್ದರು.
ಹಿಂದುಗಳು, ಹಿಂದು ಮಾಲಕತ್ವದ ಸಭಾಂಗಣದಲ್ಲೆ ಮದುವೆ ಆಗಬೇಕು, ಹಿಂದು ಮಾಲಕತ್ವದ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಬೇಕು, ಅನ್ಯ ಧರ್ಮೀಯರ ಸಭಾಂಗಣದಲ್ಲಿ ಮದುವೆ ಆಗಬಾರದು, ಅವರ ಶಾಲೆಗಳಿಗೆ ಕಳುಹಿಸಬಾರದು, ಅವರಿಗೆ ನಿಮ್ಮಿಂದ ಸಲ್ಲುವ ಆದಾಯದ ಒಂದು ಪಾಲು ವಿದೇಶಕ್ಕೆ ಸಲ್ಲುತ್ತದೆ. ಮಂಗಳೂರಿನಲ್ಲಿ ಅನೇಕ ಹಿಂದೂ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಕೊರತೆಯಿಂದ ಬಳಲುತ್ತಿದ್ದರೆ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿವೆ ಎಂದು ಹೇಳಿದ್ದರು. ಈ ಭಾಷಣದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದರ ಬೆನ್ನಲ್ಲೇ ಪೊಲೀಸರು ಅರುಣ್ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಧರ್ಮ ದ್ವೇಷದ ಭಾಷಣ ಮಾಡಿದ ಶಿಕ್ಷಕ ಡಾ. ಅರುಣ್ ಉಳ್ಳಾಲ್ ಎಬಾಂತನ ಮೇಲೆ ದಿನಾಂಕ 05/10/2024 ರಂದು ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅ ಕ್ರ ನಂ 118/2024 ಕಲಂ; 66(C) IT ACT AND 196,351 (BNS), 2023 ರಂತೆ ಪ್ರಕರಣ ದಾಖಲು ಮಾಡಲಾಗಿದೆ” ಎಂದು ನಗರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
Advertisement