
ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಚಿಕ್ಕನಹಳ್ಳಿ ಗ್ರಾಮದ ನಿವಾಸಿ 50 ವರ್ಷದ ಮಂಜಮ್ಮ ಮೃತ ಮಹಿಳೆಯಾಗಿದ್ದಾರೆ. ಮನೆ ಬಳಿ ನಿಂತಿದ್ದಾಗ ಏಕಾಏಕಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ದುರ್ಘಟನೆ ನಡೆದಿದೆ. ಮಹಿಳೆಯನ್ನು ರಕ್ಷಿಸಲು ಅಲ್ಲಿದ್ದ ಕೆಲವರು ಯತ್ನಿಸಿದ್ದರೂ ಆದರೆ ಅವರಿಗೂ ಕರೆಂಟ್ ಹೊಡೆದಿದ್ದರಿಂದ ಅವರು ದೂರ ಸರಿಯುವಂತಾಯಿತು. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದ್ದು ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮನಗರ ಜಿಲ್ಲೆಯ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ. 38 ಸೆಕೆಂಡ್‌ಗಳ ವೀಡಿಯೊದಲ್ಲಿ ಕಾಂಕ್ರೀಟ್ ರಸ್ತೆಯ ಬದಿಯಲ್ಲಿ ನಿಂತು ಇಬ್ಬರು ಮಹಿಳೆಯರು ಮಾತನಾಡುತ್ತಿದ್ದಾಗ ತಂತಿ ಅವರ ಮೇಲೆ ಬಿದ್ದಿದೆ. ಈ ವೇಳೆ ಇಬ್ಬರು ಮಹಿಳೆಯರು ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾರೆ. ಆದರೆ ಅಪಾಯದ ಅರಿವಿಲ್ಲದೆ, ಮಹಿಳೆಯೊಬ್ಬರು ಸಂತ್ರಸ್ತೆಗೆ ಸಹಾಯ ಮಾಡಲು ಪ್ರಯತ್ನಿಸಿದರು. ಆಗ ವ್ಯಕ್ತಿಯೊಬ್ಬರು ಆಕೆಯನ್ನು ಹಿಡಿದು ಬದಿಗೆ ಎಳೆದಿದ್ದರಿಂದ ಆಕೆ ಬದುಕುಳಿದಿದ್ದಾರೆ. ಈ ಘಟನೆ ಸಂಬಂಧ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪೊಲೀಸರು ನಿರ್ಲಕ್ಷ್ಯದಿಂದ ಸಾವು ಪ್ರಕರಣ ದಾಖಲಿಸಿದ್ದಾರೆ.
ಮಹಿಳೆಯ ಸಾವಿನಿಂದ ಹತಾಶಗೊಂಡ ಗ್ರಾಮಸ್ಥರು ಸಂಬಂಧಪಟ್ಟ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಇಂತಹ ಅನಾಹುತಗಳು ನಡೆಯದಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎನ್.ಶ್ರೀನಿವಾಸಯ್ಯ ಸಮಸ್ಯೆಯ ಬಗ್ಗೆ ಪರಿಶೀಲಿಸುವುದಾಗಿ ಗ್ರಾಮಸ್ಥರ ಮನವೊಲಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
Advertisement