

ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಗಾವಲು ವಾಹನದ ಮಾರ್ಗದಲ್ಲಿ ಬಂದು ಅಪಘಾತದ ಭೀತಿ ಸೃಷ್ಟಿಸಿದ್ದ ಆರೋಪದ ಮೇಲೆ ಗಣಿ ಉದ್ಯಮಿ ಹಾಗೂ ಶಾಸಕ ಜನಾರ್ದನ ರೆಡ್ಡಿ ಅವರ ಮೂರು ಐಷಾರಾಮಿ ಕಾರುಗಳನ್ನು ಗಂಗಾವತಿ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಮಂಗಳವಾರ ತಿಳಿಸಿವೆ.
ಅಕ್ಟೋಬರ್ 4 ರಂದು ಕೊಪ್ಪಳದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ ಅವರು, ಗಂಗಾವತಿ ಮಾರ್ಗವಾಗಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ವೇಳೆ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ಈ ಮಾರ್ಗದಲ್ಲಿ ವಾಹನ ಸವಾರರು ಟ್ರಾಫಿಕ್ ಜಾಮ್ ಸಮಸ್ಯೆ ಎದುರಿಸಿದ್ದರು.
ಇದೇ ವೇಳೆ ಸಿಎಂ ಎದುರಿಗೆ ಬರುತ್ತಿದ್ದ ಶಾಸಕ ಜನಾರ್ದನರೆಡ್ಡಿ ಕಾರನ್ನು ಕೂಡ ಪೊಲೀಸರು ತಡೆಯಲು ಯತ್ನಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ಶಾಸಕರು, ಕೊನೆಗೆ ಡಿವೈಡರ್ ಮೇಲೆಯೇ ಕಾರು ಹತ್ತಿಸಿ ಸಿಎಂ ಬರ್ತಿದ್ದ ಮಾರ್ಗದಲ್ಲೇ ಸ್ವತಃ ಕಾರು ಚಲಾಯಿಸಿಕೊಂಡು ತೆರಳಿದ್ದಾರೆಂದು ಆರೋಪಿಸಲಾಗಿದೆ.
ಇದು ಕೇವಲ ಎರಡು ನಿಮಿಷಗಳ ವಿಷಯವಾಗಿತ್ತು. ಒಂದು ವೇಳೆ ಕಾರಿಗೆ ಡಿಕ್ಕಿ ಹೊಡೆದಿದ್ದರೆ ಭಾರೀ ಅಪಘಾತ ಸಂಭವಿಸುತ್ತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು ಪೊಲೀಸರ ಕ್ರಮಕ್ಕೆ ಪ್ರತಿಕ್ರಿಯಿಸಿದ ರೆಡ್ಡಿ, ಮುಖ್ಯಮಂತ್ರಿ ಬೆಂಗಾವಲು ಪಡೆ ಹಾದುಹೋಗಲು ಅರ್ಧ ಗಂಟೆಯಿಂದ ಕಾಯುತ್ತಿದ್ದೆ. ಮುಖ್ಯಮಂತ್ರಿಯಾಗಲಿ ಅಥವಾ ಯಾರೇ ಆಗಲಿ ಜನರಿಗೆ ತೊಂದರೆ ಕೊಡಬಾರದು. ಬಳ್ಳಾರಿಯಲ್ಲಿ ನನ್ನ ಕುಟುಂಬದಲ್ಲಿ ಹೋಮ ನಡೆಯುತ್ತಿತ್ತು ಮತ್ತು ಪೂರ್ಣಾಹುತಿಯಲ್ಲಿ ಪಾಲ್ಗೊಳ್ಳುವ ತುರ್ತು ಇತ್ತು ಎಂದು ಹೇಳಿದ್ದಾರೆ.