ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಗಳ ಮೊಬೈಲ್'ಗಳು ಮತ್ತೆ ಆ್ಯಕ್ಟಿವ್ ಆಗಿವೆ. ಜೈಲಿನಲ್ಲಿದ್ದುಕೊಂಡೇ ರೌಡಿಶೀಟರ್ ವೊಬ್ಬ ಸಾಕ್ಷಿದಾರನಿಗೆ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ.
ಇನ್ ಸ್ಟಾಗ್ರಾಂ ಮೂಲಕ ಸಾಕ್ಷಿದಾರನೊಬ್ಬನಿಗೆ ಬೆದರಿಕೆ ಹಾಕಲಾಗಿದ್ದು, ಈ ಸಂಬಂಧ ಸಿಸಿಬಿಯಲ್ಲಿ ಪ್ರಕರಣ ದಾಖಲಾಗಿದೆ.
ಸೆಪ್ಟೆಂಬರ್ 23ರಂದು ಸಲಗ ಸೋಮ ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ನನಗೆ ಮೂರು ವಾಯ್ಸ್ ಸಂದೇಶ ಬಂದಿದ್ದು, ಅದರಲ್ಲಿ ತಮಿಳು ಮತ್ತು ಕನ್ನಡ ಮಿಶ್ರಿತ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಜೋಸೆಫ್ ಬಾಬು ಅಲಿಯಾಸ್ ಬಬ್ಲಿ ಕೊಲೆ ಪ್ರಕರಣದಲ್ಲಿ ಯಾರೊಬ್ಬರೂ ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳಬಾರದು ಎಂದು ಬೆದರಿಸಿದ್ದಾರೆ’ ಎಂದು ಅರ್ಮುಗಂ ದೂರಿನಲ್ಲಿ ತಿಳಿಸಿದ್ದಾರೆ.
ಈ ವಿಷಯವನ್ನು ಬಬ್ಲಿ ಪತ್ನಿ, ಸುನಿಲ್ ಅಲಿಯಾಸ್ ಸುಂಡಿಲಿ, ಜಾರ್ಜ್ ಹಾಗೂ ನಾದನಿಗೂ ತಲುಪಿಸಬೇಕು. ನಮ್ಮ ಬಾಸ್ ಶಿವ ಹೇಳಿದಂತೆ ಕೇಳದಿದ್ದರೆ ಎಲ್ಲರನ್ನೂ ಹೊಡೆದು ಹಾಕುತ್ತೇವೆ. ರೌಡಿ ಮಿಲಿಟರಿ ಸತೀಶನನ್ನು ಹೊಡೆದು ಹಾಕಿದ್ದೇವೆ. ಅದೇ ರೀತಿ ಜೈಲಿನಿಂದಲೇ ಎಲ್ಲರನ್ನು ಹೊಡೆದು ಹಾಕುತ್ತೇವೆ. ಆಟೊ ಓಡಿಸುವ ನಿನ್ನನ್ನೂ ಮುಗಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ದೂರು ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Advertisement