
ಮೈಸೂರು: ಮೈಸೂರು ದಸರಾದ ಜಂಬೂ ಸವಾರಿ ಮೆರವಣಿಗೆಯ ವೈಭವಕ್ಕೆ ತೆರೆ ಬಿದ್ದಿದ್ದು, ಈ ನಡುವೆ ಜಂಬೂ ಸವಾರಿ ವೇಳೆ ಪೊಲೀಸರ ವರ್ತನೆ ವಿರುದ್ಧ ಪತ್ರಕರ್ತರು ಹಾಗೂ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.
ಮೈಸೂರು ಅರಮನೆ ಮೈದಾನದಲ್ಲಿ ಹಿರಿಯ ಛಾಯಾಚಿತ್ರ ಪತ್ರಕರ್ತರೊಬ್ಬರ ಮೇಲೆ ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿದ್ದು, ಈ ಘಟನೆಗೆ ಮಾಧ್ಯಮ ಸಮುದಾಯ ಆಕ್ರೋಶಕ್ಕೆ ವ್ಯಕ್ತಪಡಿಸಿದೆ.
ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರ ಸಹಿ ಇರುವ ಮಾಧ್ಯಮ ಪಾಸ್‌ಗಳನ್ನು ಪೊಲೀಸರೇ ಪತ್ರಕರ್ತರಿಗೆ ವಿತರಿಸಿದ್ದರೂ, ಪಾಸ್ ಗಳಿದ್ದವರ ಮೇಲೂ ಪೊಲೀಸರು ದರ್ಪ ತೋರಿಸಿದ್ದಾರೆ. ಜಂಬೂ ಸವಾರಿ ವೇಳೆ ಹಲವಾರು ಫೋಟೋ ಜರ್ನಲಿಸ್ಟ್‌ಗಳು, ಪತ್ರಕರ್ತರು, ವಿಡಿಯೋಗ್ರಾಫರ್ ಹಾಗೂ ವರದಿಗಾರರು ಕರ್ತವ್ಯ ನಿರ್ವಹಿಸದಂತ ತಡೆಯೊಡ್ಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಸಾಂಸ್ಕೃತಿಕ ಹಬ್ಬದ ಸಂದರ್ಭದಲ್ಲಿ ಪೊಲೀಸರು ತೋರಿದ ವರ್ತನೆ ಇದೀಗ ಟೀಕೆಗೆ ಗುರಿಯಾಗಿದೆ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ (ಎಂಡಿಜೆಎ) ವು ಪೊಲೀಸರ ಕ್ರಮವನ್ನು "ಕ್ರೂರ ಮತ್ತು ಅನಗತ್ಯ" ಎಂದು ಬಣ್ಣಿಸಿದೆ, ಇಂತಹ ನಡವಳಿಕೆಯು ಮಾಧ್ಯಮಗಳಿಗೆ ಅಗೌರವವನ್ನುಂಟುಮಾಡುತ್ತದೆ ಮಾತ್ರವಲ್ಲದೆ ದಸರಾ ಮಹೋತ್ಸವದ ಪ್ರತಿಷ್ಠೆಗೆ ಕಳಂಕ ತಂದಿದೆ ಎಂದು ಹೇಳಿದೆ.
ದಸರಾ ಆಚರಣೆ, ಸಂಭ್ರಮಾಚರಣೆಯನ್ನು ರಾಜ್ಯ ಹಾಗೂ ವಿಶ್ವದಾದ್ಯಂತ ಹೆಸರು ಮಾಡುವಂತೆ ಮಾಡಲು ಮಾಧ್ಯಮಗಳು ತಿಂಗಳುಗಟ್ಟಲೆ ಅವಿರತವಾಗಿ ಕೆಲಸ ಮಾಡುತ್ತಿವೆ. ಆದರೆ, ಅಂತಹ ಮಾಧ್ಯಮಗಳ ಮೇಲೆಯೇ ದರ್ಪ ತೋರುವುದು ಸರಿಯಲ್ಲ. ಫೋಟೋ ಜರ್ನಲಿಸ್ಟ್ ಮೇಲಿನ ದಾಳಿಯು ಇಡೀ ಪತ್ರಕರ್ತ ಸಮುದಾಯದ ಮೇಲಿನ ದಾಳಿಯಾಗಿದೆ ಎಂದು ಎಂಡಿಜೆಎ ತಿಳಿಸಿದೆ.
ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಅವರಿಗೆ ಔಪಚಾರಿಕ ದೂರನ್ನೂ ಸಲ್ಲಿಸಿದೆ.
ಪತ್ರಕರ್ತರ ಮೇಲಿನ ಪೊಲೀಸರ ದೌರ್ಜನ್ಯವನ್ನು ಒಪ್ಪಲಾಗದು. ತಪ್ಪಿತಸ್ಥರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇವೆ. ಕ್ರಮ ಕೈಗೊಳ್ಳಲು ವಿಫಲವಾದರೆ ವ್ಯಾಪಕ ಪ್ರತಿಭಟನೆ ನಡೆಸಲಾಗವುದು ಎಂದೂ ಎಚ್ಚರಿಸಿದ್ದಾರೆ.
ದೂರಿನ ಪ್ರತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೂ ರವಾನಿಸಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
Advertisement