ಬೆಂಗಳೂರು: ಕಷ್ಟ ಹೇಳಿಕೊಂಡು ಬರುವ ಜನರಿಗೆ ಸಿಎಂ ಸ್ಥಾನದಲ್ಲಿರುವವರೂ ಯಾವ ರೀತಿ ವರ್ತಿಸಬೇಕು. ಸೌಜನ್ಯದಿಂದಲೋ ಅಥವಾ ಅಹಂಕಾರದಿಂದಲೋ. ಬೆಳಗಾವಿಯ ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ ಸಿಎಂ ಸಿದ್ದರಾಮಯ್ಯ ನಡೆದುಕೊಂಡ ರೀತಿ ಇದೀಗ ವ್ಯಾಪಕ ಟೀಕೆಗೆ ಗುರಿಯಾಗುತ್ತಿದೆ.
ತಾಯಿ ರೇಣುಕಾ ಯಲ್ಲಮ್ಮ ದೇವಿ ದರ್ಶನ ಪಡೆದು ಹೊರಬರುತ್ತಿದ್ದಾಗ ವ್ಯಕ್ತಿಯೊಬ್ಬರು ಜಿಲ್ಲಾಡಳಿತದಿಂದ ಸರಿಯಾಗಿ ಕೆಲಸ ಆಗ್ತಾ ಇಲ್ಲ ಎಂದು ತಮ್ಮ ಕಷ್ಟ ಹೇಳಿಕೊಳ್ಳುತ್ತಾರೆ. ಈ ವೇಳೆ ಆಕ್ರೋಶಗೊಂಡ ಸಿದ್ದರಾಮಯ್ಯ ಹೇ ಥೂ ಎಂದು ಬೈದಿರುವ ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಸಿಎಂ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ಸಿದ್ದರಾಮಯ್ಯ ಬರುತ್ತಿದ್ದಂತೆ ಅಭಿಮಾನಿಗಳು ಹಾಗೂ ಸ್ಥಳೀಯರ ಜಯಕಾರದ ನಡುವೆ ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ಸಾಹೇಬ್ರೇ ಬೆಳಗಾವಿಗೆ ಮೂರು, ಮೂರು ಡಿಸಿಗಳು ಬಂದರೂ ನಮ್ಮ ಕೆಲಸ ಮಾತ್ರ ಆಗಲಿಲ್ಲ ಎಂದು ಜೋರಾಗಿ ಕೂಗಿದರು. ಇದನ್ನು ಕೇಳಿಸಿಕೊಂಡ ಸಿದ್ದರಾಮಯ್ಯ ಆ ವ್ಯಕ್ತಿ ಕಡೆ ತಿರುಗಿ ಏಯ್ ಥೂ, ದೇವಸ್ಥಾನದಲ್ಲೂ ಇದೇ ಕೆಲಸನಾ ಎಂದು ಹೇಳಿ ಮುಂದೆ ಹೋಗುತ್ತಾರೆ.
ಸಿಎಂ ಸಿದ್ದರಾಮಯ್ಯ ಅವರ ಈ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಷ್ಟ ಹೇಳಿಕೊಂಡು ಬರುವವರ ಬಳಿ ಈ ರೀತಿ ವರ್ತಿಸಬಾರದು ಎಂದು ಕೆಲವರು ಟೀಕಿಸಿದ್ದರೆ ಮತ್ತೆ ಕೆಲವರು ದುರಹಂಕಾರದ ವರ್ತನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಸಿದ್ದರಾಮಯ್ಯ ಅವರ ಈ ವರ್ತನೆಯ ವಿಡಿಯೋವನ್ನು ಶೇರ್ ಮಾಡಿರುವ ವಿಪಕ್ಷ ನಾಯಕ ಆರ್. ಅಶೋಕ್ ಅವರು, ಏಯ್ ಥೂ.... ಇದೇನಾ ಒಬ್ಬ ನಾಡಿನ ಮುಖ್ಯಮಂತ್ರಿ ಪ್ರಜೆಗಳನ್ನ ನಡೆಸಿಕೊಳ್ಳಬೇಕಾದ ರೀತಿ? ಇದೇನಾ ಬಡವರು, ರೈತರು ಮೇಲೆ ಒಬ್ಬ ಮುಖ್ಯಮಂತ್ರಿಗೆ ಇರಬೇಕಾದ ಸಹನೆ, ಸಹಾನುಭೂತಿ, ಸಂವೇದನೆ? ಇದೇನಾ ಕಷ್ಟ ಹೇಳಿಕೊಳ್ಳಲು ಬಂದವರಿಗೆ ಒಬ್ಬ ಮುಖ್ಯಮಂತ್ರಿ ಸ್ಪಂದಿಸುವ ಪರಿ? ತಾಯಿ ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲೇ ಇಂತಹ ದುರ್ನಡತೆ ಪ್ರದರ್ಶನ ಮಾಡಿದ್ದಾರಲ್ಲ, ಆ ತಾಯಿ ಯಲ್ಲಮ್ಮ ಮೆಚ್ಚುತ್ತಾಳಾ? ಅದು ಹೋಗಲಿ, ಇಂತಹ ದುರ್ನಡತೆಯನ್ನ ಮುಖ್ಯಮಂತ್ರಿಗಳ 'ಆತ್ಮಸಾಕ್ಷಿ'ಯಾದರೂ ಒಪ್ಪುತ್ತಾ? ಎಂದು ಟೀಕಿಸಿದ್ದಾರೆ.
Advertisement