ಸತತ ಮಳೆಗೆ ಸಿಲಿಕಾನ್ ಸಿಟಿ ತತ್ತರ: ಸರಾಸರಿಗಿಂತ ಶೇ.228ರಷ್ಟು ಹೆಚ್ಚು ಮಳೆ: ಮಲೆನಾಡಿನಂತಾದ ಉದ್ಯಾನ ನಗರಿ

ನಗರದ ಬಹುತೇಕ ರಸ್ತೆಗಳಲ್ಲಿ ನೀರು ನದಿಯಂತೆ ಹರಿದು ಸಂಚಾರ ವ್ಯತ್ಯಯಕ್ಕೆ ಕಾರಣವಾದರೆ, ಅಪಾರ್ಟ್'ಮೆಂಟ್ ಗಳ ಬೇಸ್ ಮೆಂಟ್ ಗಳಲ್ಲಿದ್ದ ವಾಹನಗಳು ಮುಳುಗಡೆಯಾಗಿ, ಜನ ರಸ್ತೆಗಿಳಿಯಲು ಸಂಕಟ ಪಡುವಂತಾಗಿದೆ.
Bengaluru Rain
ಬೆಂಗಳೂರು ಮಳೆ.
Updated on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ತಡರಾತ್ರಿಯಿಂದ ಬಹುತೇಕ 18 ಗಂಟೆಗಳ ಎಡೆಬಿಡದೆ ಸುರಿದ ಮಳೆಗೆ ಉದ್ಯಾನನಗರಿ ನೆನೆದು ಮುದ್ದೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ನಗರದ ಬಹುತೇಕ ರಸ್ತೆಗಳಲ್ಲಿ ನೀರು ನದಿಯಂತೆ ಹರಿದು ಸಂಚಾರ ವ್ಯತ್ಯಯಕ್ಕೆ ಕಾರಣವಾದರೆ, ಅಪಾರ್ಟ್'ಮೆಂಟ್ ಗಳ ಬೇಸ್ ಮೆಂಟ್ ಗಳಲ್ಲಿದ್ದ ವಾಹನಗಳು ಮುಳುಗಡೆಯಾಗಿ, ಜನ ರಸ್ತೆಗಿಳಿಯಲು ಸಂಕಟ ಪಡುವಂತಾಗಿದೆ.

ಆಗ್ನೇಯ ಬಂಗಾಳ ಉಪಮಹಾಸಾಗರದಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಕಾರಣ ಇನ್ನೂ 2-3 ದಿನ ಇದೇ ರೀತಿಯ ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಹೀಗಾಗಿ ಮಳೆಯ ಅಬ್ಬರಕ್ಕೆ ಜನರು ಜೀವನ ಮತ್ತಷ್ಟು ಹೈರಾಣಾಗಲಿದೆ.

ಈ ನಡುವೆ ಹವಾಮಾನ ಇಲಾಖೆ ಮುನ್ಸೂಚನೆ ಹಿನ್ನೆಲೆಯಲ್ಲಿ ನಗರದ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಮಳೆ ಸಂಬಂಧಿತ ಕಾಮಗಾರಿಗಳನ್ನು ಚುರುಕುಗೊಳಿಸುವಂತೆ ಹಾಗೂ ಸನ್ನದ್ಧತೆಯನ್ನು ಹೆಚ್ಚಿಸುವಂತೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಮಂಗಳವಾರ ಬಿಬಿಎಂಪಿಗೆ ಆದೇಶ ನೀಡಿದ್ದಾರೆ.

ಬಿಬಿಎಂಪಿ ಕೇಂದ್ರ ಕಮಾಂಡ್ ಸೆಂಟರ್‌ಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಂಗಳವಾರ ಬೆಳಗ್ಗೆ ನಗರದಲ್ಲಿ ಶೇ.228ರಷ್ಟು ಮಳೆಯಾಗಿದೆ. ಬೆಳಿಗ್ಗೆ 8 ರಿಂದ ರಾತ್ರಿ 8 ರ ನಡುವೆ, ನಗರದಲ್ಲಿ 65 ಮಿಮೀ ಮಳೆಯಾಗಿದೆ, ಇದರಿಂದಾಗಿ 142 ಸ್ಥಳಗಳಲ್ಲಿ ಜಲಾವೃತ ಮತ್ತು ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈ ಪೈಕಿ 34 ಸ್ಥಳಗಳನ್ನು ಪ್ರವಾಹ ಪೀಡಿತ ಪ್ರದೇಶಗಳೆಂದು ಘೋಷಿಸಿ ಅಲ್ಲಿನ ಸಮಸ್ಯೆಗಳ ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

Bengaluru Rain
ತಮಿಳು ನಾಡು, ಆಂಧ್ರ ಮತ್ತು ಕರ್ನಾಟಕದಲ್ಲಿ ಭಾರೀ ಮಳೆ; ಇನ್ನೆರಡು ದಿನ ವಾಯುಭಾರ ಕುಸಿತ; IMD ಸೂಚನೆ

ಮಳೆಯಿಂದಾಗಿ ಬೆಂಗಳೂರಿನಾದ್ಯಂತ 30 ಮರಗಳು ಬಿದ್ದ ಪ್ರಕರಣಗಳು ವರದಿಯಾಗಿದ್ದು, ಬಿಬಿಎಂಪಿ ಅರಣ್ಯ ಇಲಾಖೆಯು ಇತರ ನಾಗರಿಕ ತಂಡಗಳೊಂದಿಗೆ 22 ಸ್ಥಳಗಳಲ್ಲಿ ಬೇರುಸಹಿತ ಮರಗಳನ್ನು ತೆರವುಗೊಳಿಸಿದೆ. ಉಳಿದ ದೂರುಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.

ಅದೇ ರೀತಿ, 35 ಮರದ ಕೊಂಬೆ ಬಿದ್ದ ಪ್ರಕರಣಗಳು ವರದಿಯಾಗಿದ್ದು, 27 ದೂರುಗಳು ಇಲ್ಲಿಯವರೆಗೆ ದಾಖಲಾಗಿವೆ ಎಂದು ತಿಳಿದುಬಂದಿದೆ.

ಮಳೆಯಿಂದಾಗಿ ಯಲಹಂಕ, ಪಶ್ಚಿಮ ಮತ್ತು ಪೂರ್ವ ವಲಯಗಳಲ್ಲಿ ಹೆಚ್ಚಿನ ದೂರುಗಳು ಬಂದಿದ್ದು, ನಗರದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಯಾ ವಲಯಗಳಲ್ಲಿ ಸನ್ನದ್ಧರಾಗಿರುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಂಗಳವಾರ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಮುಂಜಾನೆಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಎಲ್ಲ ಅಧಿಕಾರಿಗಳು ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಸಮಸ್ಯೆಗಳನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪ್ರವಾಹ ಪೀಡಿತ ಪ್ರದೇಶಗಳ ಬಳಿ ಜಾಗರೂಕರಾಗಿರಿ. ಯಾವುದೇ ಸಮಸ್ಯೆ ಕಂಡುಬಂದಲ್ಲಿ, ತಕ್ಷಣ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಬೇಕು. ರಸ್ತೆ ಮೂಲಸೌಕರ್ಯ ಇಲಾಖೆಯ ಅಧಿಕಾರಿಗಳು ಎಲ್ಲ ಪ್ರಮುಖ ರಸ್ತೆಗಳನ್ನು ಪರಿಶೀಲಿಸಿ, ನೀರು ನಿಲ್ಲದಂತೆ ಸೂಕ್ತ ಕ್ರಮಕೈಗೊಳ್ಳಬೇಕು. ಪಾಲಿಕೆ ಸಿಬ್ಬಂದಿಯ ಸಹಕಾರದಲ್ಲಿ ತ್ಯಾಜ್ಯವನ್ನು ಸ್ವಚ್ಛಗೊಳಿಸಿ ಮಳೆ ನೀರು ಸರಾಗವಾಗಿ ಪಕ್ಕದ ಚರಂಡಿಗಳಿಗೆ ಹರಿದು ಹೋಗುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಈ ನಡುವೆ ಮಾನ್ಯತಾ ಟೆಕ್ ಪಾರ್ಕ್, ಗೆದ್ದಲಹಳ್ಳಿ ರೈಲ್ವೆ ಕೆಳಸೇತುವೆ, ನಾಗವಾರ ಫ್ಲೈಓವರ್, ಯಲಹಂಕದ ಅಮೃತಹಳ್ಳಿ, ಸಾರಾಯಿಪಾಳ್ಯದ ಭರತ್ ನಗರ, ಹಲಸೂರು ಗುಪ್ತಾ ಲೇಔಟ್, ಸರ್ಜಾಪುರ ಬಳಿಯ ಬಳಗೆರೆ ರಸ್ತೆ, ಬೆಳ್ಳಂದೂರು ಸೇರಿದಂತೆ ಹಲವೆಡೆ ಪ್ರವಾಹ ಪರಿಸ್ಥಿತಿ ಎದುರಾಗಿದೆ ಎಂದು ನಿಯಂತ್ರಣ ಕೊಠಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಕ್ಟೋಬರ್ 16 ರಂದು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಕೋಲಾರ, ಮಂಡ್ಯ, ಮೈಸೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com