ಬೆಂಗಳೂರು: ಬೆಂಗಳೂರಿನ ಕೆಂಗೇರಿ ಕೆರೆಯಲ್ಲಿ ಇಬ್ಬರು ಮಕ್ಕಳು ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದ್ದು, ಈ ಪೈಕಿ ಮಂಗಳವಾರ ಒಂದು ಮೃತದೇಹ ಪತ್ತೆಯಾಗಿದೆ.
ಸೋಮವಾರ ಸಂಜೆ ಈ ದುರ್ಘಟನೆ ನಡೆದಿದ್ದು, ಮೃತ ಮಕ್ಕಳನ್ನು ಶ್ರೀನಿವಾಸ್ (ಜಾನ್ ಸೀನಾ) (15) ಮತ್ತು ಮಹಾಲಕ್ಷ್ಮಿ (13) ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ ಬಿಬಿಎಂಪಿಯಲ್ಲಿ ಪೌರಕಾರ್ಮಿಕರಾಗಿರುವ ಮೃತ ಮಕ್ಕಳ ತಾಯಿ, ಇತ್ತೀಚೆಗಷ್ಟೇ ಕೆಂಗೇರಿ ಸಮೀಪದ ಹರ್ಷ ಲೇಔಟ್ ಗೆ ಬಂದು ನೆಲೆಸಿದ್ದರು. ಕೆಲಸದ ನಿಮಿತ್ತ ತಾಯಿ ಹೊರ ಹೋಗಿದ್ದರು.
ಸಂಜೆ 5:30ರ ವೇಳೆಗೆ ಬಟ್ಟೆ ಒಗೆಯಲು ಬಂದಿದ್ದ ಅಣ್ಣ, ತಂಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಮಕ್ಕಳನ್ನು ಹುಡುಕಿಕೊಂಡು ಬಂದ ತಾಯಿ ನಾಗಮ್ಮ ಅವರಿಗೆ ಬಟ್ಟೆ ಹಾಗೂ ಪಾತ್ರೆ ಕೆರೆಯ ಬಳಿ ಪತ್ತೆಯಾಗಿದೆ.
ಈ ವೇಳೆ ಕೂಡಲೇ ನಾಗಮ್ಮ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಬಳಿಕ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿದ್ದಾರೆ. ಕೆಂಗೇರಿ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ರಾತ್ರಿಯವರೆಗೂ ಶವ ಪತ್ತೆಯಾಗಲಿಲ್ಲ. ಮಳೆ ಕಾರಣ ಮುಂಜಾನೆಯಿಂದ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಕೆಂಗೇರಿ ಸಿಪಿಐ ಸಂಜೀವ್ ಗೌಡ ತಿಳಿಸಿದ್ದಾರೆ.
ಬೆಳಗ್ಗೆ ಅಣ್ಣನ, ಸಂಜೆ ಹೊತ್ತಿಗೆ ತಂಗಿಯ ಶವ ಪತ್ತೆ
ಇಂದು ಬೆಳಗ್ಗೆ ಮತ್ತೆ ಶೋಧ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳ ಸಿಬ್ಬಂದಿಗೆ ಒಂದು ಮಗುವಿನ ಮೃತ ದೇಹ ಪತ್ತೆಯಾಗಿತ್ತು. ಬಳಿಕ ಮಹಾಲಕ್ಷ್ಮಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿತ್ತು. ಸಂಜೆ ವೇಳೆ ರಕ್ಷಣಾ ಸಿಬ್ಬಂದಿ ಮಹಾಲಕ್ಷ್ಮೀ ಮೃತದೇಹ ಪತ್ತೆ ಮಾಡಿದ್ದಾರೆ.
ಜ್ಞಾನಭಾರತಿ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಕೆಂಗೇರಿ ಪೊಲೀಸ್ ಸಿಬ್ಬಂದಿ, ಸಿವಿಲ್ ಡಿಫೆನ್ಸ್ ಸೇರಿದಂತೆ ಸುಮಾರು 15 ಜನರ ತಂಡ ಶೋಧ ಕಾರ್ಯ ನಡೆಸಿ ಎರಡು ಮೃತದೇಹಗಳನ್ನು ಪತ್ತೆ ಮಾಡಿದೆ.
Advertisement