ಅರಣ್ಯ ಭೂಮಿ ಸಮೀಕ್ಷೆಗೆ 15 ದಿನಗಳಲ್ಲಿ ಸಮಿತಿ ರಚನೆ: ರಾಜ್ಯ ಸರ್ಕಾರ

ಪರಿಭಾವಿತ ಅರಣ್ಯ ಎಂದು ಗುರುತಿಸಿರುವ ಪ್ರದೇಶದಲ್ಲಿ ಅಧಿಸೂಚಿತ ಅರಣ್ಯ, ಪಟ್ಟಾಭೂಮಿ, ಸರಕಾರಿ ಕಚೇರಿ, ಶಾಲೆ ಕಾಲೇಜುಗಳೂ ಇವೆ. ಹೀಗಾಗಿ ಇದರ ಪರಾಮರ್ಶೆ ಆಗಬೇಕು ಎಂಬ ಬೇಡಿಕೆಗಳಿವೆ.
ಸಚಿವ ಈಶ್ವರ್ ಖಂಡ್ರೆ
ಸಚಿವ ಈಶ್ವರ್ ಖಂಡ್ರೆ
Updated on

ಬೆಂಗಳೂರು: ರಾಜ್ಯದ ಅಧಿಸೂಚಿತ, ದಾಖಲಿತ ಅರಣ್ಯ ದಾಖಲೀಕರಣ ಮತ್ತು ಪರಿಭಾವಿತ ಅರಣ್ಯ ಭೂಮಿಯ ನ್ಯೂನತೆ ಸರಿಪಡಿಸುವ ಸಂಬಂಧ ತಜ್ಞರ ಸಮಿತಿಯನ್ನು 15 ದಿನಗಳಲ್ಲಿ ರಚನೆ ಮಾಡಲಾಗುವುದು ಎಂದು ಸಚಿವ ಈಶ್ವರ್ ಖಂಡ್ರೆಯವರು ಗುರುವಾರ ಹೇಳಿದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಭೇಟಿ ಮಾಡಿದ ಬಳಿಕ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಈ ವಿಷಯ ತಿಳಿಸಿದರು.

ವನ್ ಸಂರಕ್ಷಣ ಏವಂ ಸಂವರ್ಧನ ಅಧಿನಿಯಮ 1980ರ ನಿಯಮ 16ರಡಿ ಹೊಸದಾಗಿ ತಜ್ಞರ ಸಮಿತಿ ರಚಿಸಲು ಅವಕಾಶವಿದ್ದು, ಈ ಸಮಿತಿ ರಾಜ್ಯದ ಅಧಿಸೂಚಿತ ಮತ್ತು ದಾಖಲಿಸಲಾದ ಅರಣ್ಯ ಪ್ರದೇಶದ ಸಮಗ್ರ ದಾಖಲೀಕರಣ ಮತ್ತು ಪರಿಭಾವಿತ ಅರಣ್ಯ ಪ್ರದೇಶದ ಲೋಪದೋಷ ಸರಿಪಡಿಸಲು ಪರಾಮರ್ಶಿಸಿ 6 ತಿಂಗಳೊಳಗೆ ವರದಿ ಸಲ್ಲಿಸಲಿದೆ ಎಂದು ಹೇಳಿದರು.

ಪರಿಭಾವಿತ ಅರಣ್ಯ ಎಂದು ಗುರುತಿಸಿರುವ ಪ್ರದೇಶದಲ್ಲಿ ಅಧಿಸೂಚಿತ ಅರಣ್ಯ, ಪಟ್ಟಾಭೂಮಿ, ಸರಕಾರಿ ಕಚೇರಿ, ಶಾಲೆ ಕಾಲೇಜುಗಳೂ ಇವೆ. ಹೀಗಾಗಿ ಇದರ ಪರಾಮರ್ಶೆ ಆಗಬೇಕು ಎಂಬ ಬೇಡಿಕೆಗಳಿವೆ. ಹೀಗಾಗಿ ಸಮೀಕ್ಷೆ ನಡೆಸಿ ಸಮಗ್ರ ವರದಿ ಸಿದ್ಧಪಡಿಸಲಾಗುವುದು ಎಂದರು.

ಸಚಿವ ಈಶ್ವರ್ ಖಂಡ್ರೆ
ಕಳ್ಳಬೇಟೆ ಕಡಿಮೆಯಾಗಿದೆ, ಆದರೆ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗಿದೆ: ಸಚಿವ ಈಶ್ವರ್ ಖಂಡ್ರೆ (ಸಂದರ್ಶನ)

ತಜ್ಞರ ಸಮಿತಿ-1 ಸಮೀಕ್ಷೆ ನಡೆಸಿ 9,94,881.11 ಹೆಕ್ಟೇರ್ ಪ್ರದೇಶವನ್ನು ಪರಿಭಾವಿತ ಅರಣ್ಯ ಎಂದು ಗುರುತಿಸಿತ್ತು. ಆದರೆ, ಈ ಗುರುತಿಸುವಿಕೆಯಲ್ಲಿ ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ತಜ್ಞರ ಸಮಿತಿ-2ನ್ನು ನೇಮಿಸಲಾಗಿತ್ತು. ಈ ಸಮಿತಿ 3,30,286.93 ಹೆಕ್ಟೇರ್ ಪ್ರದೇಶವನ್ನು ಪರಿಭಾವಿತ ಎಂದು ಗುರುತಿಸಿತ್ತು. ಪುನರ್ ಪರಿಶೀಲನೆಗೆ ನೇಮಿಸಲಾಗುವ ಸಮಿತಿ ಈಗಾಗಲೇ ಸುಪ್ರೀಂಕೋರ್ಟ್‍ಗೆ ಪ್ರಮಾಣಪತ್ರದಲ್ಲಿ ತಿಳಿಸಲಾಗಿರುವ 3,30,286.93 ಹೆಕ್ಟೇರ್ ಪರಿಭಾವಿತ ಅರಣ್ಯ ಪ್ರದೇಶದಲ್ಲಿ ಸರಕಾರಿ ಕಚೇರಿ, ಶಾಲೆ, ಪಟ್ಟಾಭೂಮಿ ಇತ್ಯಾದಿ ಇದ್ದಲ್ಲಿ, ಇದಕ್ಕೆ ಪರ್ಯಾಯವಾಗಿ ಮರಗಿಡಗಳಿಂದ ಸಮೃದ್ಧವಾದ ಇತರ ಪ್ರದೇಶವನ್ನು ಗುರುತಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಈಗಾಗಲೇ ಕಂದಾಯ ಇಲಾಖೆ ಸೂಚನೆ ನೀಡಿದ್ದು, ರಾಜ್ಯದ 20 ಜಿಲ್ಲೆಗಳಲ್ಲಿ ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಒಂದೆರೆಡು ಜಿಲ್ಲೆ ಆಯ್ಕೆ ಮಾಡಿಕೊಂಡು, ಜಂಟಿ ಸರ್ವೆ ನಡೆಸಿದಲ್ಲಿ ಸಮಸ್ಯೆಗಳು, ಗೊಂದಲಗಳ ಬಗ್ಗೆ ತಿಳಿಯುತ್ತದೆ. ಇದು ನೂತನ ತಜ್ಞರ ಸಮಿತಿ ವರದಿ ಸಲ್ಲಿಕೆಗೆ ನೆರವಾಗಲಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com