
ಬೆಂಗಳೂರು: ಕಳೆದ ವರ್ಷ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೆ ರೈತ ಸಮುದಾಯವು ಭೀಕರ ಬರಗಾಲವನ್ನು ಎದುರಿಸಿತ್ತು. ಈ ವರ್ಷ ಖಾರಿಫ್ ಮತ್ತು ರಬಿ ಋತುವಿನಲ್ಲಿ ಉತ್ತಮ ಮಳೆಯಾಗಿದ್ದು, ರೈತರ ಮುಖದಲ್ಲಿ ಸಂತಸ ತರಿಸಿತ್ತು.
ಉತ್ತಮ ಮಳೆಯಿಂದಾಗಿ ಖಾರಿಫ್ ಮತ್ತು ರಬಿ ಕಟಾವಿಗೆ ಸಿದ್ಧವಾಗಿತ್ತು. ಆದರೆ, ಅಕ್ಟೋಬರ್ ನಲ್ಲಿ ಸುರಿದ ಭಾರೀ ಮಳೆ ಸಾವಿರಾರು ಹೆಕ್ಟೇರ್ ಬೆಳೆ ನಾಶವಾಗುವಂತೆ ಮಾಡಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ (KSNDMC) ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 1 ರಿಂದ 24 ರವರೆಗೆ 246 ತಾಲ್ಲೂಕುಗಳ ಪೈಕಿ 153 ತಾಲೂಕುಗಳಲ್ಲಿ ಅಧಿಕ ಮಳೆಯಾಗಿದೆ ಎಂದು ತಿಳಿದುಬಂದಿದೆ.
2023 ರಲ್ಲಿ, ರಾಜ್ಯದಲ್ಲಿ 123 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಮಳೆಯಾಗಿತ್ತು. 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಜೋಳ, ರಾಗಿ, ಭತ್ತ ಮತ್ತು ದ್ವಿದಳ ಧಾನ್ಯಗಳಂತಹ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ತೀವ್ರ ಬರದಿಂದಾಗಿ ಕಡಿಮೆ ಇಳುವರಿಯಾಗಿತ್ತು.
ಕಳೆದ ಕೆಲ ದಿನಗಳಿಂದ ಸುರಿದ ಭಾರೀ ಮಳೆಗೆ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ಅಧಿಕಾರಿಗಳು ಹಾನಿಯನ್ನು ಅಂದಾಜಿಸುತ್ತಿದ್ದಾರೆ. ಸಮೀಕ್ಷೆ ಪೂರ್ಣಗೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಅವರು ಹೇಳಿದ್ದಾರೆ. ಪ್ರಾಥಮಿಕ ಅಂದಾಜಿನ ಪ್ರಕಾರ ಒಂದು ಲಕ್ಷ ಹೆಕ್ಟೇರ್‌ನಲ್ಲಿ ಕೃಷಿ ಬೆಳೆ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ.
ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಮಾತನಾಡಿ, ಜೋಳ, ಮೆಕ್ಕೆ ಜೋಳದಂತಹ ಅನೇಕ ಖಾರಿಫ್ ಬೆಳೆಗಳು ಮತ್ತು ಕಟಾವಿಗೆ ಸಿದ್ಧವಾಗಿದ್ದುವು. ಆದರೆ, ಭಾರೀ ಮಳೆಯಿಂದಾಗಿ ಹಾನಿಯುಂಟಾಗಿದೆ. ಈರುಳ್ಳಿ ಮತ್ತು ಮೆಣಸಿನಕಾಯಿಯಂತಹ ತೋಟಗಾರಿಕೆ ಬೆಳೆಗಳೂ ನಾಶವಾಗಿವೆ. ರಬಿ ಬೆಳೆಗಳ ಬಿತ್ತನೆ ಈಗ ಆರಂಭವಾಗಬೇಕಿತ್ತು, ಆದರೆ ಮಣ್ಣಿನಲ್ಲಿ ತೇವಾಂಶ ಹೆಚ್ಚಿರುವ ಕಾರಣ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಕೆಲವೆಡೆ ಹತ್ತಿ, ಭತ್ತ, ಶೇಂಗಾ ಮತ್ತಿತರ ಬೆಳೆ ಹಾನಿಯಾಗಿದೆ ಎಂದು ಹಿರಿಯ ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಾವೇರಿಯಲ್ಲಿ ಮೇ ತಿಂಗಳಲ್ಲಿ ಜೋಳ ಬಿತ್ತನೆ ಮಾಡಲಾಗಿದ್ದು, ರೈತರು ಕಟಾವು ಮುಗಿಸಿದ್ದರು. ಆದರೆ ಭಾರೀ ಮಳೆಯಿಂದಾಗಿ ಕಟಾವು ಮಾಡಿದ ಬೆಳೆಗಳು ಮೊಳಕೆಯೊಡೆಯಲು ಪ್ರಾರಂಭಿಸಿವೆ ಎಂದು ತಿಳಿಸಿದ್ದಾರೆ.
ಮಲೆನಾಡಿನಲ್ಲಿ ಅಡಿಕೆ, ಕಾಫಿ ತೋಟಗಳು ಮಳೆಯಿಂದ ಹಾನಿಗೀಡಾಗಿವೆ. ಇದರಿಂದ ಕಡಿಮೆ ಇಳುವರಿ ಬರುತ್ತದೆ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗಳಿಂದ ಸಮೀಕ್ಷೆ ನಡೆಸಲಾಗುತ್ತಿದೆ. ಮಾರ್ಗಸೂಚಿಯಂತೆ ರೈತರಿಗೆ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.
Advertisement