
ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶುಕ್ರವಾರ ಕುಟುಂಬ ಸಮೇತ ಹಾಸನಾಂಬೆ ದರ್ಶನ ಪಡೆದುಕೊಂಡಿದ್ದು, ಈ ವೇಳೆ ವಿಶೇಷ ಪೂಜೆ ಸಲ್ಲಿಸಿದರು.
ಹಾಸನಾಂಬೆ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ತಾಯಿ ಹಾಸನಾಂಬೆ ದರ್ಶನಕ್ಕೆ ಬಂದಿದ್ದೇನೆ. ಈ ವರ್ಷ ತಾಯಿ ಕೃಪೆಯಿಂದ ಮಳೆ-ಬೆಳೆ ಉತ್ತಮವಾಗಿದೆ. ರಾಜ್ಯದ ಜನರಿಗೆ ನೆಮ್ಮದಿಯನ್ನ ತಾಯಿ ಕೊಟ್ಟಿದ್ದಾರೆ. ರಾಜ್ಯದ ಜನತೆಗೆ ಉತ್ತಮ ಆರೋಗ್ಯ, ಐಶ್ವರ್ಯ ನೀಡಲಿ ಎಂದು ಪ್ರಾರ್ಥನೆ ಮಾಡಿದ್ದೇವೆ. ಜಿಲ್ಲಾಡಳಿತ ಹಾಸನಾಂಬೆ ದರ್ಶನ ಚೆನ್ನಾಗಿ ಮಾಡಿದೆ ಎಂದು ಹೇಳಿದರು.
ಇದೇ ವೇಳೆ ರಾಜಕೀಯ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ಅವರು, 3 ಕ್ಷೇತ್ರಗಳ ಉಪ ಚುನಾವಣೆ ಬಗ್ಗೆ ಈಗ ಮಾತನಾಡಲ್ಲ ಎಂದು ತಿಳಿಸಿದರು.
ಹಾಸನಾಂಬೆ ಶಕ್ತಿಶಾಲಿ ದೇವತೆಯಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯ ರಕ್ಷಣೆಯನ್ನು ಮಾಡುತ್ತಾಳೆ, ಪ್ರತಿಯೊಬ್ಬ ನಾಗರಿಕನ ಶಾಂತಿ, ಶಕ್ತಿ ಮತ್ತು ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸಿದ್ದೇನೆ. ರಾಜ್ಯದಲ್ಲಿಯೂ ಉತ್ತಮ ಮಳೆಯಾಗಿದೆ, ಇದು ರೈತರಿಗೆ ಸಹಾಯ ಮಾಡಿದೆ, ಎಲ್ಲರಿಗೂ ದೇವಿಯ ಆಶೀರ್ವಾದವಿದೆ ಎಂದು ಹೇಳಿದರು.
ಬಳಿಕ ಭಕ್ತರ ಅನುಕೂಲಕ್ಕಾಗಿ ಜಿಲ್ಲಾಡಳಿತ ಮಾಡಿರುವ ವ್ಯವಸ್ಥೆಗೆ ಡಿಕೆ.ಶಿವಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಡಿಕೆ.ಶಿವಕುಮಾರ್ ಹಾಗೂ ಅವರ ಪತ್ನಿಗೆ ಶಾಲು ಹೊದಿಸಿ, ಏಲಕ್ಕಿ ಮಾಲೆ, ಹಣ್ಣುಹಂಪಲು ನೀಡಿ ಸನ್ಮಾನಿಸಿದರು.
Advertisement