
ಮಂಗಳೂರು: ತನ್ನೊಂದಿಗೆ ಬಾರದೇ ಇದ್ದರೆ, ಕೊಲ್ಲದೆ ಬಿಡುವುದಿಲ್ಲ ಎಂದು ಯುವಕನೊಬ್ಬ ಮಾಡಿದ್ದ ಬೆದರಿಕೆ ಸಂದೇಶಕ್ಕೆ ಹೆದರಿದ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಯುವತಿಯ ಅಣ್ಣನಿಗೆ ಯುವಕ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಸಂದೇಶ ಹಾಕುತ್ತಿದ್ದನು. ನನ್ನ ಪ್ರೀತಿಸುವಂತೆ ನಿನ್ನ ಸಹೋದರಿಗೆ ಹೇಳು, ಇಲ್ಲದಿದ್ದರೆ ಆಕೆಯನ್ನು 24 ತುಂಡು ಮಾಡುವೆ ಎಂದು ಯುವತಿಯ ಅಣ್ಣನಿಗೆ ಅನ್ಯ ಕೋಮಿನ ಯುವಕ ಬೆದರಿಕೆ ಸಂದೇಶ ಕಳುಹಿಸಿದ್ದನು.
ಬೆದರಿಕೆಗೆ ಸಂಬಂಧಿಸಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸದಾಶಿವ ನಗರದ ಶಾರಿಕ್ ಹಾಗೂ ನೂರ್ಜಹಾನ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷೃ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ಅವರಿಬ್ಬರನ್ನು ಬಿಟ್ಟು ಕಳುಹಿಸಿದ್ದಾರೆ.
ಈ ಬಳಿಕವೂ ಯುವತಿಯ ಸಹೋದರನಿಗೆ ನಿರಂತರ ಬೆದರಿಕೆ ಸಂದೇಶ ಬಂದಿದೆ. ಗುರುವಾರ ರಾತ್ರಿ 1 ಗಂಟೆಗೆ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ‘ನಿನ್ನ ತಂಗಿಯನ್ನು ಬಿಡುವುದಿಲ್ಲ’ ಎಂದು ಸಂದೇಶ ಕಳುಹಿಸಿದ ಹಿನ್ನೆಲೆಯಲ್ಲಿ ಮನನೊಂದ ಯುವತಿ ಬೆಳಗ್ಗಿನ ಜಾವ 3.30ಕ್ಕೆ ಡೋಲೊ-650 ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಆತ್ಮಹತ್ಯೆಗೆ ಯತ್ನಕ್ಕೂ ಮುನ್ನ ಯುವತಿ ಡೆತ್ ನೋಟ್ ಬರೆದಿಟ್ಟಿದ್ದಾಳೆ. ಇಡ್ಯಾ ನಿವಾಸಿ, ಮುಸ್ಲಿಂ ಸಮುದಾಯದ ಯುವಕ ಕಿರುಕುಳ ನೀಡುತ್ತಿದ್ದಾನೆ. ಪೊಲೀಸರಿಂದಲೂ ಯಾವುದೇ ನ್ಯಾಯ ಸಿಕ್ಕಿಲ್ಲ. ಒಬ್ಬ ಮುಸ್ಲಿಮನ ಕೈಯಲ್ಲಿ ಅತ್ಯಾಚಾರ ಆಗಿ ಸಾಯುವ ಬದಲು ಈಗಲೇ ಸಾಯುತ್ತೇನೆ. ಶಾರೀಕ್ ಹಾಗೂ ನೂರ್ಜಾನ್ ಇಬ್ಬರನ್ನೂ ಬಿಡಬಾರದು ಎಂದು ಬರೆದಿದ್ದಾರೆ.
ಇದೀಗ ಯುವತಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆರೋಪಿ ವಿರುದ್ಧ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಏತನ್ಮಧ್ಯೆ, ಪೊಲೀಸರು ಕ್ರಮ ಕೈಗೊಳ್ಳಲು ವಿಳಂಬ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಭರತ್ ಶೆಟ್ಟಿ ಆರೋಪಿಸಿದ್ದು, ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
Advertisement