
ಬೆಂಗಳೂರು: ನಗರದಲ್ಲಿ ಮಳೆಯ ಅವಾಂತರದಿಂದ ಬಾಬುಸಾ ಪಾಳ್ಯದಲ್ಲಿ ನಿರ್ಮಾಣ ಹಂತದ ಏಳು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಘಟನೆಯಲ್ಲಿ 9 ಮಂದಿ ಮೃತರಾದ ಬಳಿಕ ಎಚ್ಚೆತ್ತುಕೊಂಡಿರುವ ಬಿಬಿಎಂಪಿ, ಅನಧಿಕೃತ ಕಟ್ಟಡಗಳ ತೆರವು ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ವಲಯ ಆಯುಕ್ತರ ಹೆಗಲಿಗೆ ಕಟ್ಟಡಗಳ ಸರ್ವೆ ಮಾಡಿ ವರದಿ ಸಲ್ಲಿಸುವ ಜವಾಬ್ದಾರಿ ವಹಿಸಿದೆ. ಆದರೆ ಇದರ ನಡವೆಯೇ ಬಿಬಿಎಂಪಿ ವಿರುದ್ಧ ಹಲವು ದೂರುಗಳು ಕೇಳಿ ಬಂದಿವೆ.
ಮಹಿಳೆಯೊಬ್ಬರು ತಮ್ಮ 15x20 ಚದರ ಅಡಿ ವಿಸ್ತೀರ್ಣದ ಮನೆಯ ಮುಂದೆ ಹೊಸದಾಗಿ ನಿರ್ಮಾಣವಾಗುತ್ತಿರುವ ಅಕ್ರಮ ಕಟ್ಟಡದಿಂದ ರಕ್ಷಿಸಲು 2022 ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಎಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ನಗರ ಯೋಜನೆ ಸಹಾಯಕ ನಿರ್ದೇಶಕ (ಎಡಿಟಿಪಿ), ಬಿಬಿಎಂಪಿ ಮತ್ತು ನಗರ ಯೋಜನೆ ಸಹಾಯಕ ಎಂಜಿನಿಯರ್ ಅವರನ್ನು ಸಂಪರ್ಕಿಸಿದ್ದರು.
ಬಿಬಿಎಂಪಿ ಕೇಂದ್ರ ಕಚೇರಿಯಿಂದ ಕೆಲವೇ ನೂರು ಮೀಟರ್ ದೂರದಲ್ಲಿರುವ ಶಾಂತಿನಗರದ ಅಕ್ಕಿತಿಮ್ಮನಹಳ್ಳಿಯ ಗೋಸಯ್ಯ ಬೀದಿಯಲ್ಲಿ ಆರು ಅಂತಸ್ತಿನ ಮನೆ ನಿರ್ಮಿಸುತ್ತಿದ್ದರು. ಬಿಬಿಎಂಪಿ ಎಂಜಿನಿಯರ್‌ಗಳು ಕ್ರಮ ಕೈಗೊಳ್ಳುವ ಬದಲು ಉಲ್ಲಂಘಿಸುವವರಿಗೆ ಸಹಾಯ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಬರ್ಟಾ ಆಲ್ಬರ್ಟ್ ಥಾಮಸ್ ಅವರು ಈ ಸಂಬಂಧ ದೂರು ಸಲ್ಲಿಸಿದಾಗ, ಅಲ್ಲಿದ್ದ ಎಡಿಟಿಪಿ ಆಕೆಗೆ ನಿನ್ನ ಪತಿ ಅಥವಾ ಮಕ್ಕಳನ್ನು ಕಚೇರಿಗೆ ಕರೆತರುವಂತೆ ಹೇಳಿದರು ಎಂದು ಆರೋಪಿಸಿದ್ದಾರೆ. ಬಾಬುಸಾಪಾಳ್ಯದಲ್ಲಿ ಇತ್ತೀಚೆಗೆ ಕಟ್ಟಡ ಕುಸಿದು ಬಿದ್ದಿರುವುದರಿಂದ ತಮ್ಮ ಕುಟುಂಬ ನಿದ್ದೆಯಿಲ್ಲದೆ ರಾತ್ರಿ ಕಳೆಯುತ್ತಿದೆ ಎಂದು ಬರ್ಟಾ ಆಲ್ಬರ್ಟ್ ಥಾಮಸ್ ಹೇಳಿದರು.
“2022 ರಲ್ಲಿ, ನಾನು ಬಿಬಿಎಂಪಿ ಎಂಜಿನಿಯರ್‌ಗಳನ್ನು ಸಂಪರ್ಕಿಸಿದೆ, ಆದರೆ ಅವರು ನನ್ನನ್ನು ನಿರ್ಲಕ್ಷಿಸುತ್ತಲೇ ಇದ್ದರು. ಜೂನ್ 2024 ರಲ್ಲಿ, ನಾನು ಮತ್ತೆ ವಲಯ ಆಯುಕ್ತ ಸ್ನೇಹಲ್ ಆರ್ ಅವರನ್ನು ಭೇಟಿ ಮಾಡಿದ್ದೇನೆ ಮತ್ತು ಅದೇ ದಿನ ನಾನು ಎಡಿಟಿಪಿ ಲಿಯಾಖತ್ ಮತ್ತು ಟೌನ್ ಪ್ಲಾನಿಂಗ್ ಎಇ ಸುರೇಶ್ ಅವರನ್ನು ಸಂಪರ್ಕಿಸಿದೆ. ವಲಯ ಆಯುಕ್ತರು ಕ್ರಮ ತೆಗೆದುಕೊಳ್ಳುವುದಾಗಿ ಸುಳ್ಳು ಭರವಸೆ ನೀಡಿದರು, ಎಡಿಟಿಪಿ ಪದೇ ಪದೇ ತಮ್ಮ ಕಚೇರಿಗೆ ಬರುತ್ತಿರುವುದಕ್ಕೆ ಅಸಮಾಧಾನಗೊಂಡು ನನ್ನ ಪತಿ ಅಥವಾ ಮಕ್ಕಳನ್ನು ಅವರ ಕಚೇರಿಗೆ ಕರೆತರುವಂತೆ ಹೇಳಿದರು.
ಸ್ಥಳಕ್ಕೆ ಎಇ ಸುರೇಶ್ ಆಗಮಿಸಿ ಕ್ರಮ ಕೈಗೊಳ್ಳುವ ಬದಲು ಒಂದು ಗಂಟೆಗೂ ಹೆಚ್ಚು ಕಾಲ ನಿಯಮ ಉಲ್ಲಂಘಿಸಿದವರ ಮನೆಯಲ್ಲೇ ಕಾಲ ಕಳೆದರು. ಆ ಸಮಯದಲ್ಲಿ, ಕಟ್ಟಡವು ಸುಮಾರು ನಾಲ್ಕು ಮಹಡಿಗಳನ್ನು ಹೊಂದಿತ್ತು. ಬಿಬಿಎಂಪಿ ನಿರ್ಲಕ್ಷ್ಯದಿಂದಾಗಿ ಮಾಲೀಕರು ಮತ್ತೆರಡು ಮಹಡಿಗಳನ್ನು ಸೇರಿಸಿ ನಿರ್ಮಿಸಿದ್ದಾರೆ. ಅಕ್ರಮ ಕಟ್ಟಡದಲ್ಲಿ 16 ಘಟಕಗಳಿವೆ ಎಂದು ಆಕೆ ಆರೋಪಿಸಿದ್ದಾರೆ. ವಾರ್ಡ್ ಎಇಇ ಸಾವಿತ್ರಿ ಕೂಡ ತಮ್ಮ ದೂರನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಅಕ್ಟೋಬರ್‌ನಲ್ಲಿ ಶಾಂತಿನಗರದಿಂದ ಶಿವಾಜಿನಗರಕ್ಕೆ ಸಾವಿತ್ರಿಯನ್ನು ವರ್ಗಾವಣೆ ಮಾಡಲಾಗಿತ್ತು.
ಸೆಪ್ಟೆಂಬರ್ ಮೊದಲ ವಾರದಲ್ಲಿ ದೂರುದಾರರು ತಮ್ಮ ಕುಟುಂಬ ಸದಸ್ಯರೊಂದಿಗೆ ಬಿಬಿಎಂಪಿ ಕಚೇರಿಗೆ ನುಗ್ಗಿ ಲೋಕಾಯುಕ್ತರನ್ನು ಸಂಪರ್ಕಿಸುವುದಾಗಿ ಅಧಿಕಾರಿಗಳಿಗೆ ತಿಳಿಸಿದರು. ಕೂಡಲೇ ಬಿಬಿಎಂಪಿ ಅಧಿಕಾರಿಗಳು ಬಿಬಿಎಂಪಿ ಕಾಯ್ದೆಯ ಸೆಕ್ಷನ್ 356 (1)ರ ಅಡಿಯಲ್ಲಿ ಅಕ್ರಮ ಕಟ್ಟಡದ ಮಾಲೀಕರಿಗೆ ನೆಲಸಮ ನೋಟಿಸ್ ನೀಡಿದರು. ಈಗಲೂ ಅವರು ಅಕ್ರಮ ಕಟ್ಟಡ ಕೆಡವಲು ವಿಳಂಬ ಮಾಡುತ್ತಿದ್ದಾರೆ. ನ್ಯಾಯಾಲಯದ ತಡೆಯಾಜ್ಞೆ ಪಡೆಯಲು ಮಾಲೀಕರಿಗೆ ಕಾಲಾವಕಾಶ ನೀಡುತ್ತಿರುವುದು ಕಂಡುಬರುತ್ತಿದೆ. ನಾನು ಈಗ ಲೋಕಾಯುಕ್ತರನ್ನು ಸಂಪರ್ಕಿಸುತ್ತೇನೆ ಎಂದು ಹೇಳಿದ್ದಾರೆ. ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಎಡಿಟಿಪಿ ಲಿಯಾಕತ್ ಅವರನ್ನು ಸಂಪರ್ಕಿಸಿತು ಬಿಬಿಎಂಪಿ ಕಟ್ಟಡವನ್ನು ಕೆಡವಲಿದೆ ಎಂದು ಹೇಳಿದ ಅವರು ಇನ್ನೂ ದಿನಾಂಕ ನಿರ್ಧರಿಸಿಲ್ಲ ಎಂದು ತಿಳಿಸಿದ್ದಾರೆ.
Advertisement