Meenakshi Bali
ಡಾ.ಮೀನಾಕ್ಷಿ ಬಾಳಿ

ವಚನ ದರ್ಶನ ಪುಸ್ತಕಕ್ಕೆ ಲಿಂಗಾಯತ ಸಮುದಾಯ ಕೌಂಟರ್: 'ವಚನ ನಿಜದರ್ಶನ' ಬಿಡುಗಡೆ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಇತ್ತೀಚೆಗೆ ಕಲಬುರಗಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಶಾಸಕ ಬಿ.ಆರ್. ಪಾಟೀಲ್ ಅವರು ವಚನ ನಿಜದರ್ಶನ ಪುಸ್ತಕ ಬಿಡುಗಡೆ ಮಾಡಿದರು.
Published on

ಬೆಂಗಳೂರು: ವಿವಾದಾತ್ಮಕ ವಚನ ದರ್ಶನ ಪುಸ್ತಕಕ್ಕೆ ತಿರುಗೇಟು ನೀಡಲು ಲಿಂಗಾಯತ ಸಮುದಾಯವು ಡಾ.ಮೀನಾಕ್ಷಿ ಬಾಳಿ ಅವರು ಬರೆದ ವಚನ ನಿಜದರ್ಶನ ಪುಸ್ತಕವನ್ನು ಬಿಡುಗಡೆಗೊಳಿಸಿದ್ದಾರೆ.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಇತ್ತೀಚೆಗೆ ಕಲಬುರಗಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಶಾಸಕ ಬಿ.ಆರ್. ಪಾಟೀಲ್ ಅವರು ವಚನ ನಿಜದರ್ಶನ ಪುಸ್ತಕ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಅವರು ವಚನಗಳು ಕೇವಲ ವೇದ ಮತ್ತು ಉಪನಿಷತ್ತುಗಳ ಮುಂಬುವರೆದ ಭಾಗ ಎಂಬ ಹೇಳಿಕೆಯನ್ನು ನಿರಾಕರಿಸಿದರು.

ವಚನ ಸಾಹಿತ್ಯವನ್ನು ರಚನೆ ಮಾಡಿದ ಶರಣರು ವೈದಿಕ ಸಂಸ್ಕೃತಿಯ ಆಚರಣೆ, ಕಂದಾಚಾರವನ್ನು ತಿರಸ್ಕರಿಸಿ ಹೊರಗೆ ಬಂದರು. ಅವರು ಸ್ವತಂತ್ರವಾಗಿ ರಚನೆ ಮಾಡಿದ್ದೇ ವಚನ ಸಾಹಿತ್ಯ. ಇದು ಯಾವುದೇ ವೇದ, ಉಪನಿಷತ್ತಿನ ಮುಂದುವರಿದ ಭಾಗವಲ್ಲ. ವಚನ ಸಾಹಿತ್ಯವನ್ನು ಸುಟ್ಟು ಹಾಕಿದವರಿಗೆ ಇಂದು ಉಳಿದಿರುವ ವಚನಗಳನ್ನು ನಾಶ ಮಾಡಲು ಆಗುತ್ತಿಲ್ಲ. ಹೀಗಾಗಿ, ಅವುಗಳನ್ನು ತಿರುಚುವ ಯತ್ನ ಆರಂಭಿಸಿದ್ದಾರೆ ಎಂದು ಹೇಳಿದರು.

ಡಾ.ಮೀನಾಕ್ಷಿ ಬಾಳಿ ಮಾತನಾಡಿ, ತಪ್ಪು ಹಾದಿಗೆಳೆಯುತ್ತಿರುವ ವಚನ ದರ್ಶನ ಪುಸ್ತಕ ನಿರಾಕರಿಸಿ, ಮೊದಲ ಪ್ರತಿಕ್ರಿಯೆಯಾಗಿ ಪುಸ್ತಕ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಭಾಗಗಳಲ್ಲಿ ಪುಸ್ತಕವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

Meenakshi Bali
ಬೆಂಗಳೂರು: 'ವಚನ ದರ್ಶನ' ಪುಸ್ತಕ ಬಿಡುಗಡೆಗೆ ವಿರೋಧ, ಪ್ರತಿಭಟನೆ

ಇದೇ ವೇಳೆ ವಚನ ದರ್ಶನ ಪುಸ್ತಕವನ್ನು ಕೂಲಂಕಷವಾಗಿ ಪರಿಶೀಲಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಟದಿಂದ ಪುಟವನ್ನು ಎಚ್ಚರಿಕೆಯಿಂದ ಓದಿದ್ದೇನೆ. ‘ವಚನ ನಿಜ ದರ್ಶನ’ ಎಲ್ಲರೂ ಬೇಗನೆ ಓದಿ ಅರ್ಥ ಮಾಡಿಕೊಳ್ಳಬಹುದಾದ ಸರಳ ಭಾಷೆಯಲ್ಲಿರುವ 60 ಪುಟಗಳ ಪುಟ್ಟ ಪುಸ್ತಕ. ಮೊದಲು ಬರೆದದ್ದು ಇನ್ನೂ ದೊಡ್ಡ ಪುಸ್ತಕವಾಗಿತ್ತು. ಎಲ್ಲರೂ ಓದಲು ಸುಲಭವಾಗಲಿ ಎಂದು 60 ಪುಟಗಳಿಗೆ ಇಳಿಸಿದೆ.

ಸಂಘ ಪರಿವಾರದ ‘ವಚನ ದರ್ಶನ’ದ ಸಮಸ್ಯೆ, ಅಜೆಂಡಾ, ವಿರೋಧಾಭಾಸಗಳ ಬಗ್ಗೆ ಜಾಗೃತಿ ಮೂಡಿಸುವುದು ನನ್ನ ಮುಖ್ಯ ಉದ್ದೇಶವಾಗಿದೆ. ವಚನ ದರ್ಶನ’ ಒಂದು ಸಾಮಾನ್ಯ ಪುಸ್ತಕ. ಆದರೆ, ಅದನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೇರೆ ಬೇರೆ ಜಿಲ್ಲೆಗಳಲ್ಲಿ ಸಂಘ ಪರಿವಾರದವರು ಬಿಡುಗಡೆ ಮಾಡಿದ್ದಾರೆ. ನಮ್ಮಲ್ಲಿ ಅಷ್ಟು ಹಣವಿಲ್ಲದಿದ್ದರೂ, ಅಷ್ಟೇ ಪರಿಣಾಮಕಾರಿಯಾಗಿ ಬಿಡುಗಡೆ ಮಾಡಲಾಗುವುದು.ಬೇರೆ ಬೇರೆ ಜಿಲ್ಲೆಗಳಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಪುಸ್ತಕ ಬಿಡುಗಡೆ ಮಾಡಲು ಕೈಜೋಡಿಸುತ್ತಿವೆ. ಎಲ್ಲ ಕಡೆ ಹೋಗಿ ನಾನೆ ಮಾತನಾಡುತ್ತೇನೆ, ಬೇರೆಯವರೂ ಮಾತನಾಡುತ್ತಾರೆ. ವಿದ್ಯಾರ್ಥಿಗಳನ್ನು, ಮಕ್ಕಳನ್ನು ಮುಟ್ಟಲು ಬೇರೆ ಯೋಜನೆ ಸಿದ್ಧವಾಗುತ್ತಿದೆ. ಒಂದು ಕಾರ್ಯಪಡೆ ಪುಸ್ತಕದ ಪ್ರಚಾರ ಮತ್ತು ಬಿಡುಗಡೆ ಕಾರ್ಯವನ್ನು ಆಯೋಜಿಸುತ್ತಿದೆ. ಅವರಿಗಿಂತ ಹೆಚ್ಚಿನ ಶ್ರಮ ಹಾಕಿ ಪುಸ್ತಕವನ್ನು ಜನರಿಗೆ ಮುಟ್ಟಿಸುತ್ತೇವೆ. ಕ್ರಿಯಾ ಪ್ರಕಾಶನ ಹೊರ ತಂದಿರುವ ಪುಸ್ತಕಕ್ಕೆ 70 ರುಪಾಯಿ ಬೆಲೆಯಿದೆ. ಹೆಚ್ಚಿನ ಪ್ರತಿಗಳನ್ನು ತೆಗೆದುಕೊಂಡರೆ ಶೇ.30 ರಿಯಾಯತಿ ನೀಡಲಾಗುತ್ತಿದೆ ಎಂದು ಹೇಳಿದರು.

ಬಸವಣ್ಣ ಜಾತಿ, ಬಡತನ, ಅಸಮಾನತೆಯ ಬಗ್ಗೆ ಮಾತನಾಡಿಲ್ಲ ಎಂಬ ಹುನ್ನಾರ ಇತ್ತೀಚಿಗೆ ನಡೆದಿದೆ. ಕಲ್ಯಾಣದಲ್ಲಿ ಕ್ರಾಂತಿ ಆಗಿಲ್ಲರಲಿಕ್ಕಿಲ್ಲ. ಶಾಸನಗಳು ಹೊಟ್ಟೆ ತುಂಬಿದವರ ಸಾಹಿತ್ಯ. ಶರಣರು ಮೌಖಿಕವಾಗಿ ತಮ್ಮ ಪರಂಪರೆಯನ್ನು ಕಟ್ಟಿಕೊಂಡು ಬಂದಿದ್ದಾರೆ. ವೇದ, ಉಪನಿಷತ್ ಗಳನ್ನು ಶರಣರು ನಖಶಿಕಾಂತವಾಗಿ ಖಂಡಿಸಿದರು. ಅಂತೆಯೇ ವೈದಿಕರು ವಚನ ಸಾಹಿತ್ಯಕ್ಕೆ ನಡಗುತ್ತಾರೆ. ಈ ಬಗ್ಗೆ ನಾವು ಎಚ್ಚರ ವಹಿಸಬೇಕು. ಸಕಲ ಜೀವಾತ್ಮರಿಗೆ ಲೇಸ ಬಯಸಿದ ಶರಣರು ವ್ಯಕ್ತಿಯನ್ನು ವಿರೋಧಿಸಲಿಲ್ಲ. ಸಮಾಜಕ್ಕೆ ಧಕ್ಕೆ ತರುವ ವಿಚಾರಗಳನ್ನು ವಿರೋಧಿಸಿದರು. ಶರಣರು ಸಮಾಜದ ಕಟ್ಟ ಕಡೆಯ ಮನುಷ್ಯನಿಗೆ ದಾರ್ಶನಿಕತೆಯನ್ನು ಒದಗಿಸಿದವರು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com