
ಬೆಂಗಳೂರು: ವಿವಾದಿತ ಪುಸ್ತಕ ವಚನ ದರ್ಶನ ಬಿಡುಗಡೆ ವಿರೋಧಿಸಿ ಬೆಂಗಳೂರಿನಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು,
ಭಾರತೀಯ ವಿದ್ಯಾಭವನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ ಸಿ.ಆರ್ ಅವರು ಸಂಜೆ 6 ಗಂಟೆಗೆ ಪುಸ್ತಕವನ್ನು ಬಿಡುಗಡೆ ಮಾಡಿದರು.
ಈ ಪುಸ್ತಕ ಬಿಡುಗಡೆ ವಿರೋಧಿಸಿ ಪ್ರಗತಿಪರ ಲಿಂಗಾಯತ ನಾಯಕರು ಮಂಗಳವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ನಂಜನಗೂಡು, ಚಾಮರಾಜನಗರ, ಚಿತ್ರದುರ್ಗ, ಹೊಸೂರು, ವಿಜಯಪುರ, ರಾಯಚೂರು ಸೇರಿದಂತೆ ವಿವಿಧೆಡೆಯಿಂದ ಜನರು ಆಗಮಿಸಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ ಪ್ರತಿಭಟನೆ ನಡೆಸಿದರು. ಪುಸ್ತಕದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಅಲ್ಲದೆ, ಪುಸ್ತಕದ ಮುಖಪುಟಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟದ ಅಧ್ಯಕ್ಷ ಓಂಕಾರ್ ಚೊಂಡಿ ಅವರು, ವಚನ ದರ್ಶನ ಪುಸ್ತಕದ ಲೇಖಕರು ಮತ್ತು ಪ್ರಕಾಶಕರು ಬಸವಣ್ಣನವರ ಬೋಧನೆಗಳನ್ನು ತಪ್ಪಾಗಿ ನಿರೂಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಲೇಖಕರು, ಅಯೋಧ್ಯೆ ಪಬ್ಲಿಕೇಷನ್ಸ್ ಲಿಂಗಾಯತ ಮುಖಂಡರೊಂದಿಗೆ ಚರ್ಚೆ ನಡೆಸುವಂತೆ ಸವಾಲು ಹಾಕಿದರು.
ಪುಸ್ತಕದಲ್ಲಿ ಮೂಲ ವಚನ ಸಾಹಿತ್ಯವನ್ನೇ ವಿರೂಪಗೊಳಿಸಲಾಗಿದೆ. ಪ್ರಾಮಾಣಿಕವಾಗಿ ಆಸಕ್ತಿಯುಳ್ಳ ಓದುಗರು ಸರ್ಕಾರ ಪ್ರಕಟಿಸಿರುವ ವಚನ ಸಾಹಿತ್ಯದ ಸಂಪುಟಗಳನ್ನು ಪರಾಮರ್ಶಿಸುವಂತೆಯೂ ಇದೇ ವೇಳೆ ಮನವಿ ಮಾಡಿಕೊಂಡು.
ಈ ನಡುವಲ್ಲೇ ಬೆಂಗಳೂರು ಅಷ್ಟೇ ಅಲ್ಲದೆ, ಕಲಬುರಗಿಯಲ್ಲೂ ಪ್ರತಿಭಟನೆಗಳು ನಡೆದವು. ಈ ವೇಳೆ ಸುಮಾರು 50 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧನಕ್ಕೊಳಪಡಿಸಿದರು.
ಪುಸ್ತಕದ ವಿರುದ್ಧದ ಪ್ರತಿಭಟನೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ದಳ ಮತ್ತು ಶರಣ ಸಂಸ್ಕೃತಿ ರಾಜಶನಾ ವೇದಿಕೆ ಸೇರಿದಂತೆ ಹಲವಾರು ಪ್ರಮುಖ ಲಿಂಗಾಯತ ಸಂಘಟನೆಗಳು ಬೆಂಬಲಿಸಿದವು.
ಪ್ರತಿಭಟನೆಯಲ್ಲಿ ಚಿಕ್ಕಮಗಳೂರಿನ ಬಸವ ಕೇಂದ್ರದ ಪೂಜ್ಯ ಶ್ರೀ ಬಸವಯೋಗಿ ಪ್ರಭುಗಳು, ಮಂಡ್ಯದ ಶ್ರೀ ಓಂಕಾರೇಶ್ವರ ಸ್ವಾಮೀಜಿ ಮುಂತಾದ ಧಾರ್ಮಿಕ ಮುಖಂಡರು ಭಾಗವಹಿಸಿದ್ದರು.
ಆರಂಭದಲ್ಲಿ, ಪ್ರತಿಭಟನಾಕಾರರು ಬಸವೇಶ್ವರ ವೃತ್ತದ ಬಳಿಯ ಬಸವೇಶ್ವರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲು ಚಿಂತನೆ ನಡೆಸಿದ್ದರು. ಆದರೆ, ಪೊಲೀಸರು ಅನುಮತಿ ನೀಡದ ಕಾರಣ ಫ್ರೀಡಂ ಪಾರ್ಕ್‌ನಲ್ಲಿ ನಡೆಸಲಾಯಿತು ಎಂದು ತಿಳಿದುಬಂದಿದೆ.
ಈ ನಡುವೆ ಲಿಂಗಾಯತರಾಗಿರುವ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಅವರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರೂ ಪ್ರತಿಭಟನಾಕಾರರ ವಿರುದ್ಧ ಏನನ್ನೂ ಹೇಳದೇ ಇರುವುದು ಕುತೂಹಲಕ್ಕೆ ಕಾರಣವಾಗಿದೆ.
Advertisement