
ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುರುವಾರ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಡಿಎ ಆಯುಕ್ತ ಎನ್.ಜಯರಾಂ, ಡಿಸಿಎಂ ಕಾರ್ಯದರ್ಶಿ ರಾಜೇಂದ್ರ ಚೋಳನ್, ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಮತ್ತಿತರರೊಂದಿಗೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು.
ಬೆಂಗಳೂರಿನ ಹದಗೆಟ್ಟ ರಸ್ತೆ ಹಾಗೂ ಐಟಿ ಕಾರಿಡಾರ್ ಜಲಾವೃತ ಕುರಿತ ಟ್ವೀಟ್ ಬೆನ್ನಲ್ಲೇ ಶಾ ಅವರನ್ನು ಉಪ ಮುಖ್ಯಮಂತ್ರಿ ಭೇಟಿಯಾಗಿದ್ದಾರೆ.ಇತ್ತೀಚಿಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬೆಂಗಳೂರಿನ ರಸ್ತೆ ಸರಿಪಡಿಸಲು ELCITA ಗೆ ಗುತ್ತಿಗೆ ನೀಡುವಂತೆ, ಬಿಬಿಎಂಪಿಗೆ ಗುತ್ತಿಗೆ ನೀಡದಂತೆ ಕಿರಣ್ ಮಜುಂದಾರ್ ಶಾ ಟ್ವೀಟ್ ಮಾಡಿದ್ದರು.
ಇದು ಕೇವಲ ದೀಪಾವಳಿ ಪ್ರಯುಕ್ತ ಸೌಜನ್ಯದ ಭೇಟಿಯಾಗಿರದೆ ಐಟಿ ಕಾರಿಡಾರ್ ನಲ್ಲಿ ಹೆಬ್ಬಾಳ ಹೊರ ವರ್ತುಲ ರಸ್ತೆಯಿಂದ ಕೆಆರ್ ಪುರಂ, ಮಹದೇವಪುರ, ವೈಟ್ ಫೀಲ್ಡ್, ಮಾರತಹಳ್ಳಿ ಹೊರ ವರ್ತುಲ ರಸ್ತೆ, ಸರ್ಜಾಪುರ, ಬೊಮ್ಮನಹಳ್ಳಿ ಮತ್ತು ಎಲೆಕ್ಟ್ರಾನಿಕ್ ಸಿಟಿಯಲ್ಲಿನ ರಸ್ತೆ ಸರಿಪಡಿಸುವ ಗುರಿಯಿಂದ ಕೂಡಿತ್ತು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹಿಂದೆ ಐಟಿ ಕಾರಿಡಾರ್ ಭಾಗವಾಗಿರುವ ಬೊಮ್ಮನಹಳ್ಳಿಯಲ್ಲಿ ಭಾರಿ ಮಳೆಯಿಂದ ರಸ್ತೆ ಹಾನಿಯಾದ ನಂತರ ಅಕ್ಟೋಬರ್ 25 ರಂದು ಕಿರಣ್ ಮಜುಂದಾರ್ ಶಾ ಮಾಡಿದ್ದ ಟ್ವೀಟ್ ಸಾಕಷ್ಟು ವೈರಲ್ ಆಗಿತ್ತು. ಟ್ವೀಟ್ ನ್ನು ಡಿಕೆ ಶಿವಕುಮಾರ್ ಹಾಗೂ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಟ್ಯಾಗ್ ಮಾಡಿದ್ದರು. ಇದರಿಂದಾದ ಡ್ಯಾಮೇಜ್ ಕಂಟ್ರೋಲ್ ಮಾಡುವ ರೀತಿಯಲ್ಲಿ ಈ ಸಭೆ ನಡೆದಿರುವಂತೆ ಕಾಣುತ್ತಿದೆ.
Advertisement