ಬೆಂಗಳೂರು: ಕೋರಮಂಗಲ ಪಿಜಿಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ 1205 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಜುಲೈ 24ರಂದು ಕೋರಮಂಗಲದ ಪಿಜಿಗೆ ನುಗ್ಗಿ ಕೃತಿಕುಮಾರಿ ಎಂಬ ಯುವತಿಯನ್ನು ಚಾಕುವಿನಿಂದ ಇರಿದು ಮಧ್ಯಪ್ರದೇಶದ ಬೇಗಂಗಂಜ್ ಮೂಲದ ಅಭಿಷೇಕ್ ಘೋಷಿ ಎಂಬಾತ ಬರ್ಬರವಾಗಿ ಹತ್ಯೆ ಮಾಡಿದ್ದ. ಈ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾಗದಲ್ಲಿ ರೆಕಾರ್ಡ್ ಆಗಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಘಟನೆ ಬೆನ್ನಲ್ಲೇ ಮಹಿಳೆಯರ ಸುರಕ್ಷತೆ ಬಗ್ಗೆ ಸಾಕಷ್ಟು ಚರ್ಚೆಗಳು ಪ್ರಾರಂಭವಾಗಿದ್ದವು. ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ತನಿಖೆಯನ್ನು ಚುರುಕುಗೊಳಿಸಿ ಜುಲೈ.26 ರಂದು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದರು.
ಇದೀಗ 85 ಸಾಕ್ಷಿಗಳನ್ನು ಒಳಗೊಂಡ ಚಾರ್ಜ್ಶೀಟ್ ಅನ್ನು ಪೊಲೀಸರು ಸಲ್ಲಿಸಿದ್ದು, ಚಾರ್ಜ್ ಶೀಟ್ ನಲ್ಲಿ ಪೇಯಿಂಗ್ ಗೆಸ್ಟ್ ಮಾಲೀಕರ ಹೇಳಿಕೆಗಳೂ ಇವೆ ಎಂದು ತಿಳಿದುಬಂದಿದೆ.
ಎಂಬಿಎ ಪದವೀಧರರಾದ ಕುಮಾರಿ ಜನವರಿಯಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಾರ್ಚ್‌ನಿಂದ ಪಿಜಿಯಲ್ಲಿ ನೆಲೆಸಿದ್ದಳು. ಆರೋಪಿ ಅಭಿಷೇಕ್, ಕೃತಿಕುಮಾರಿ ಸ್ನೇಹಿತೆಯನ್ನು ಲವ್ ಮಾಡುತ್ತಿದ್ದ. ಆದರೆ, ಆಕೆಗೆ ಟಾರ್ಚರ್ ಕೊಡುತ್ತಿದ್ದ. ಈ ವಿಷಯ ಗೊತ್ತಾಗಿ ಕೃತಿ ತನ್ನ ಗೆಳತಿಯನ್ನ ರಕ್ಷಿಸಿದ್ದಳು. ಇದೇ ಸಿಟ್ಟಲ್ಲಿ ಪಿಜಿಗೆ ಬಂದ ಅಭಿಷೇಕ್ ಕೃತಿಕುಮಾರಿಯನ್ನು ಹತ್ಯೆ ಮಾಡಿತ್ತು. ಬಳಿಕ ಸೀದಾ ಆಟೋ ಏರಿ, ಮೆಜೆಸ್ಟಿಕ್ ತಲುಪಿದ್ದ. ಅಲ್ಲಿಂದ ಮಧ್ಯಪ್ರದೇಶ ರೈಲು ಹತ್ತಿ ಎಸ್ಕೇಪ್ ಆಗಿದ್ದ. ಈ ಬಗ್ಗೆ ಮಾಹಿತಿ ಕಲೆಹಾಕಿದ್ದ ಪೊಲೀಸರು ಭೋಪಾಲ್ನಲ್ಲಿ ಆತನನ್ನು ಬಂಧನಕ್ಕೊಳಪಡಿಸಿದ್ದರು.
ಘಟನೆ ಬೆನ್ನಲ್ಲೇ ಕೋರಮಂಗಲ ಪೊಲೀಸರು, ಪೇಯಿಂಗ್ ಗೆಸ್ಟ್ ಮಾಲೀಕ ಶ್ಯಾಮ್ ಸುಂದರ್ ರೆಡ್ಡಿ ವಿರುದ್ಧ BNS ಸೆಕ್ಷನ್ 125 ರ ಅಡಿಯಲ್ಲಿ ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡಿದ್ದಕ್ಕಾಗಿ ಪ್ರಕರಣವನ್ನು ದಾಖಲಿಸಿದ್ದಾರೆ.
ಈ ನಡುವೆ ತನಿಖೆಯಲ್ಲಿ ಪಿಜಿಯಿಲ್ಲಿ ಎಲ್ಲಾ ಸುರಕ್ಷತಾ ಕ್ರಮಗಳು ಅನುಸರಿಸಿರುವುದಾಗಿ ತಿಳಿದುಬಂದಿದೆ, ಆದರೆ, ಘಟನೆ ವೇಳೆ ಆರೋಪಿಯು ಪಿಜಿಗೆ ಪ್ರವೇಶಿಸಿದಾಗ, ಸೆಕ್ಯುರಿಟಿ ಗಾರ್ಡ್ ಕೌಂಟರ್‌ನಲ್ಲಿ ಇರದೆ, ಮೇಲಿನ ಮಹಡಿಗೆ ತೆರಳಿದ್ದ ಎಂದು ತಿಳಿದುಬಂದಿದೆ.
Advertisement